ಬಸ್ ಅಪಘಾತ:ಮೂವರು ಯೋಧರ ಸಾವು
ಶ್ರೀನಗರ,ಸೆ.೨೧-ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಎರಡನೇ ಹಂತದ ಚುನಾವಣೆಗೆ ಸಿಬ್ಬಂಧಿಯನ್ನು ಸಾಗಿಸುತ್ತಿದ್ದ ಗಡಿ ಭದ್ರತಾ ಪಡೆ- ಬಿಎಸ್‌ಎಫ್ ಬಸ್ ಅಪಘಾತಕ್ಕೆ ಒಳಗಾದ ಪರಿಣಾಮ ಕನಿಷ್ಠ ಮೂವರು ಸೈನಿಕರು ಸಾವನ್ನಪ್ಪಿ, ೩೨ಕ್ಕೂ ಅಧೀಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಬುದ್ಗಾಮ್ ಜಿಲ್ಲೆಯ ಬ್ರೆಲ್ ವಾಟರ್‍ಹೇಲ್ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಗಡಿ ಭದ್ರತಾ ಪಡೆ ಗುಡ್ಡಗಾಡು ರಸ್ತೆಯಿಂದ ಕಂದಕಕ್ಕೆ ಬಿದ್ದ ಪರಿಣಾಮ ಮೂವರು ಬಿಎಸ್‌ಎಫ್ ಸಿಬ್ಬಂದಿ ಸಾವನ್ನಪ್ಪಿದ್ದು, ೩೨ ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಬಸ್ಸಿನ ನಾಗರಿಕ ಚಾಲಕ ಕೂಡ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗಿದೆ
ಗಾಯಾಳುಗಳನ್ನು ಖಾನ್ ಸಾಹಿಬ್ ಮತ್ತು ಬುದ್ಗಾಮ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ೨೦೨೪ ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಗಾಗಿ ಪುಲ್ವಾಮಾದಿಂದ ಬುದ್ಗಾಮ್‌ಗೆ ಸೈನಿಕರನ್ನು ಸಾಗಿಸುತ್ತಿದ್ದ ಬಸ್ ಈ ಘಟನೆ ಸಂಭವಿಸಿದೆ.
ಸಿಬ್ಬಂದಿ ಇದ್ದ ಬಸ್ ಪೊಲೀಸ್ ಪೋಸ್ಟ್‌ನಿಂದ ಕೇವಲ ೬೦೦ ಮೀಟರ್ ದೂರದಲ್ಲಿರುವ ಕಮರಿಗೆ ಬಿದ್ದಿತು. ಇಬ್ಬರು ಯೋಧರು ವಾಹನದೊಳಗೆ ಸಿಲುಕಿಕೊಂಡಿದ್ದಾರೆ. ಪಾರುಗಾಣಿಕಾ ಪ್ರಯತ್ನಗಳು ನಡೆದಿವೆ.ಸ್ಥಳೀಯ ಪೋಲೀಸ್ ಮತ್ತು ನಾಗರಿಕರ ರಕ್ಷಣಾ ಕಾರ್ಯದಲ್ಲಿ ನಿರತಗಾಗಿದ್ದಾರೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ೯೦ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಮೊದಲ ಹಂತ ಸೆಪ್ಟೆಂಬರ್ ೧೮ ರಂದು ಜಮ್ಮುವಿನ ಮೂರು ಮತ್ತು ಕಾಶ್ಮೀರ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿ ೨೪ ಕ್ಷೇತ್ರಗಳಿಗೆ ನಡೆದಿದ್ದದು ಎರಡನೇ ಹಂತ ಇದೇ ೨೫ ರಂದು ಹಾಗು ಮೂರನೇ ಹಂತ ಅಕ್ಟೋಬರ್ ೧ ರಂದು ನಡೆಯಲಿದ್ದು ಅಕ್ಟೋಬರ್ ೮ ರಂದು ಮತ ಎಣಿಕೆ ನಡೆಯಲಿದೆ
ಡಿಜಿಪಿ ಸಂತಾಪ
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಆರ್.ಆರ್.ಸ್ವೈನ್ ಅವರು ಬುಡ್ಗಾಮ್ ಜಿಲ್ಲೆಯ ಬ್ರೆಲ್ ವಾಟರ್‍ಹೇಲ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ,
ಮೂವರು ಗಡಿ ಭದ್ರತಾ ಪಡೆ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡಿದೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಅವರೆಲ್ಲಾ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ
೩೬ ಬಿಎಸ್‌ಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಉರುಳಿ ಈ ದುರ್ಘಟನೆ ಸಂಭವಿಸಿದೆ.