ಮಹದಾಯಿ ಯೋಜನೆ ಅನುಷ್ಠಾನಕ್ಕೆ ಪ್ರವೀಣ್ ಶೆಟ್ಟಿ ಆಗ್ರಹ
ಹುಬ್ಬಳ್ಳಿ, ಸೆ. ೨೦- ಮಹದಾಯಿ ಯೋಜನೆ ಅನುಷ್ಠಾನ ಮಾಡುವ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಗದಗ ಜಿಲ್ಲೆಯ ನರಗುಂದದಿಂದ ಗದಗ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದರು.
ಗದಗ ಜಿಲ್ಲೆಯ ನರಗುಂದಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ಚೆನ್ನಮ್ಮ ವೃತದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿಗೆ ತಮ್ಮ ಸಂಘಟನೆಯ ಪ್ರಮುಖರು ಸೇರಿ ಕಾರ್ಯಕರ್ತರೊಂದಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಹದಾಯಿ ಯೋಜನೆಗಾಗಿ ಈ ಭಾಗದ ಅನ್ನದಾತರು ಸುಮಾರು ಐದು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ನಿದ್ದೆಯಲ್ಲಿರೋ ಸರ್ಕಾರಗಳಿಗೆ ಅನ್ನದಾತರ ಹಾಗೂ ಈ ಭಾಗದ ಜನರ ಕೂಗು ಕೇಳುತ್ತಿಲ್ಲ. ಹಾಗಾಗಿ ನಾವು ಕೂಡಾ ಮಹದಾಯಿ ಹೋರಾಟಕ್ಕೆ ಅನ್ನದಾತರೊಂದಿಗೆ ಕೈ ಜೋಡಿಸುವ ನಿಟ್ಟಿನಲ್ಲಿ ಗದಗ ಜಿಲ್ಲಾ ಕಚೇರಿಯವರೆಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಲು ಗದಗ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಶಾಸಕರು ಹಾಗೂ ಎಂಪಿಗಳು ಮಹದಾಯಿ ಯೋಜನೆ ಅನುಷ್ಠಾನಕ್ಕೆ, ತಮ್ಮ ಎಲ್ಲಾ ಪ್ರತಿಷ್ಠೆ, ರಾಜಕೀಯ ಪಕ್ಕಕ್ಕೆ ಇಟ್ಟು, ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.
ಕೇಂದ್ರ ಸರ್ಕಾರ ಮಹದಾಯಿ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡುವುದನ್ನು ಬಿಟ್ಟು, ರಾಜ್ಯದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬೇಕಾಗಿರೋ ಕ್ಲಿಯರೆನ್ಸ್ ನೀಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸುವ ಮೂಲಕ ಈ ಎರಡೂ ಸರ್ಕಾರಗಳಿಗೆ ಬಿಸಿ ಮುಟ್ಟಿಸುತ್ತೇವೆ.
ಮಹದಾಯಿ ಯೋಜನೆ ಅನುಷ್ಠಾನದ ಕರವೇ ಪ್ರವೀಣ್ ಶೆಟ್ಟಿ ಬಣದ ಹೋರಾಟಕ್ಕೆ ೫೦ಕ್ಕೂ ಹೆಚ್ಚು ಅಟೋಗಳು ಸಾಥ್ ನೀಡಿ, ನರಗುಂದದ ಕಡೆ ತೆರಳಿದವು