ವಕ್ಫ್ ಆಸ್ತಿ ಕಬಳಿಕೆ; ಪರ್ಯಾಯ ಭೂಮಿಗೆ ಸಿಎಂಗೆ ಮನವಿ:ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್
ಕಲಬುರಗಿ: ಸೆ.19:ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡು ಸಾರ್ವಜನಿಕರು ಹಾಗೂ ಸರಕಾರಿ ಸಂಸ್ಥೆಗಳು ಕಟ್ಟಡಗಳನ್ನು ನಿರ್ಮಿಸಿಕೊಂಡಿವೆ. ಹೀಗಾಗಿ, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಕ್ಫ್ ಇಲಾಖೆಗೆ ಬೇರೆಡೆ ಸ್ಥಳ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ 1 ಲಕ್ಷ 11 ಸಾವಿರ ವಕ್ಫ್ ಆಸ್ತಿಗಳಿದ್ದು, ಈ ಪೈಕಿ 23640 ಆಸ್ತಿಗಳನ್ನು ಒತ್ತು ಮಾಡಿಕೊಳ್ಳಲಾಗಿದೆ. ಆಳಂದ ಪಟ್ಟಣದಲ್ಲಿ ಪೊಲೀಸ್ ಇಲಾಖೆ ವಕ್ಫ್ ಇಲಾಖೆಗೆ ಸೇರಿದ 23 ಎಕರೆಯಲ್ಲಿ ಪೊಲೀಸ್ ವಸತಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೆ, ರಾಯಚೂರಿನಲ್ಲಿ ಐದು ಎಕರೆ ಸಾರ್ವಜನಿಕರು ದಶಕಗಳ ಹಿಂದೆಯೇ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಂತಹ ಬಹಳಷ್ಟು ಪ್ರಕರಣಗಳು ರಾಜ್ಯಾದ್ಯಂತ ಕಾಣಬಹುದಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ನುಡಿದರು.
ಕಲಬುರಗಿ ನಗರದಲ್ಲಿ ಬುಧವಾರ ನಡೆದ ವಕ್ಫ್ ಅದಾಲತ್‍ನಲ್ಲಿ ಕಲಬುರಗಿ ಜಿಲ್ಲೆಯಿಂದ 100 ಅರ್ಜಿಗಳು ಖಾತಾ ಮತ್ತು ಸರ್ವೆ ಮಾಡಿಕೊಡುವಂತೆ ಬಂದಿದ್ದು, 55 ಅರ್ಜಿಗಳು ಖಬರ್‍ಸ್ತಾನ್ (ಸ್ಮಶಾನ ಭೂಮಿ) ನೀಡುವಂತೆ ಕೋರಿ ಬಂದಿವೆ. ಮೇಲಾಗಿ ಅನುದಾ ಮತ್ತು ಕಮಿಟಿ ರಚಿಸಿಕೊಡುವಂತೆ 200 ಅರ್ಜಿಗಳು ಬಂದಿವೆ ಎಂದರು.
ಯಾದಗಿರಿ ಜಿಲ್ಲೆಯಿಂದ 82 ಅರ್ಜಿಗಳು ಬಂದಿದ್ದು, 38 ಅರ್ಜಿಗಳು ಒತ್ತುವರಿ ತೆರವಿಗೆ ಒತ್ತಾಯಿಸಿ ಬಂದಿದ್ದರೆ, 33 ಅರ್ಜಿಗಳು ಸ್ಮಶಾನ ಭೂಮಿಗೆ ಒತ್ತಾಯಿಸಿ ಬಂದಿವೆ. ಮತ್ತೊಂದೆಡೆ, 11 ಅರ್ಜಿಗಳು ಸಮಿತಿ ರಚನೆ ಮತ್ತು ಅನುದಾನಕ್ಕೆ ಕೋರಿ ಬಂದಿವೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರು, ಮುನ್ಸಿಪಾಲಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಅಧಿಕಾರಿಗಳ ಸಭೆ ಕೈಗೊಳ್ಳಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 1768 ವಕ್ಫ್ ಆಸ್ತಿಗೆ ಖಾತಾ ಮಾಡಿಸುವುದು ಬಾಕಿ ಉಳಿದಿದ್ದು, 258 ಖಾತಾ ಈಗಾಗಲೇ ಮಾಡಿಕೊಡಲಾಗಿದೆ. ಬಾಕಿ ಇರುವ 516 ಆಸ್ತಿಗಳನ್ನು ಮುಂದಿನ ಒಂದು ತಿಂಗಳಲ್ಲಿ ಖಾತಾ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ಆಯಾ ತಾಲೂಕುಗಳ ತಹಸೀಲ್ದಾರ್‍ರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ 494 ಆಸ್ತಿಗಳಿಗೆ ಖಾತಾ ಆಗಬೇಕಿದ್ದು, ಈ ಪೈಕಿ 337 ಖಾತಾ ಆಗಿದ್ದು ಉಳಿದ 152 ಆಸ್ತಿಗಳಿಗೆ ಮುಂದಿನ ಒಂದು ತಿಂಗಳಲ್ಲಿ ಖಾತಾ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‍ರು ಭರವಸೆ ನೀಡಿದ್ದಾರೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 21440 ವಕ್ಫ್ ಆಸ್ತಿಗಳ ಪೈಕಿ 3610 ಒತ್ತುವರಿಯಾಗಿವೆ. ಯಾದಗಿರಿ ಜಿಲ್ಲೆಯ 6194 ಆಸ್ತಿಗಳ ಪೈಕಿ 123 ಆಸ್ತಿಗಳು ಒತ್ತುವರಿಯಾಗಿವೆ ಎಂದು ಸಚಿವ ಜಮೀರ್ ಅಹ್ಮದ್ ವಿವರಿಸಿದರು.