ನಟ ಸಲ್ಮಾನ್ ಖಾನ್ ತಂದೆಗೆ ಜೀವ ಬೆದರಿಕೆ, ದೂರು
ಮುಂಬೈ.ಸೆ.೧೯- ನಟ ಸಲ್ಮಾನ್ ಖಾನ್ ತಂದೆ ಹಾಗೂ ಖ್ಯಾತ ಬರಹಗಾರ ಸಲೀಂ ಖಾನ್ ಅವರಿಗೆ ಪ್ರಾಣ ಬೆದರಿಕೆ ಹಾಕಲಾಗಿದ್ದು ಪ್ರಕರಣದ ಸಂಬಂಧ ಅಪರಿಚಿತ ಮಹಿಳೆಯ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಅವರಿಗೆ ಮತ್ತೊಂದು ಬೆದರಿಕೆ ಬಂದಿದೆ. ಸಲೀಂ ಖಾನ್ ಅವರು ಇಂದು ವಾಯು ವಿಹಾರಕ್ಕೆ ತೆರಳುತ್ತಿದ್ದಾಗ ಅಪರಿಚಿತ ಮಹಿಳೆಯೊಬ್ಬರು ಅವರಿಗೆ ಬೆದರಿಕೆ ಪತ್ರ ನೀಡಿದ್ದಾರೆ. ‘ಲಾರೆನ್ಸ್ ಬಿಷ್ಣೋಯ್ ಅವರನ್ನು ಕಳುಹಿಸಬೇಕೇ ಎಂದು ಪತ್ರದಲ್ಲಿ ಬರೆದಿದೆ.
ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಅಪರಿಚಿತ ಮಹಿಳೆಯಿಂದ ಸಲೀಂ ಖಾನ್‌ಗೆ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಮಹಿಳೆ ಯಾರು? ಅವರು ಎಲ್ಲಿಂದ ಬಂದಿದ್ದರು? ಅವರು ನಿಜಕ್ಕೂ ಬಿಷ್ಣೋಯ್ ಗ್ಯಾಂಗ್‌ನವರಾ
ಎಂಬ ಸಂಶಯ ಮೂಡಿದೆ. ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ನಲ್ಲಿರುವ ಸಲ್ಮಾನ್ ಮನೆಯ ಗೋಡೆಗೆ ಇಬ್ಬರು ಯುವಕರು ಗುಂಡಿನ ದಾಳಿ ನಡೆಸಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಜೂನ್‌ನಲ್ಲಿ ಸಲ್ಮಾನ್ ಖಾನ್ ಮತ್ತು ಸಲೀಂ ಖಾನ್‌ಗೆ ಕೊಲೆ ಬೆದರಿಕೆಗಳು ಬಂದಿದ್ದವು. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.