ಲಕ್ನೊ ಚಾಲೆಂಜ್ ಗೆದ್ದ ಕೋಲ್ಕತ್ತಾ
ಕೋಲ್ಕತ್ತಾ: ಓಪನರ್ ಫಿಲ್ ಸಾಲ್ಟ್ ಅವರ ಸೋಟಕ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್ಗೆ ಗೆಲುವು ದಾಖಲಿಸಿದೆ.
ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೊ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿತು. ಕೋಲ್ಕತ್ತಾ ತಂಡ 15.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಲಕ್ನೊ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟಾನ್ ಡಿಕಾಕ್ ಮತ್ತು ನಾಯಕ ಕೆ.ಎಲ್.ರಾಹುಲ್ ಉತ್ತಮ ಆರಂಭ ನೀಡಲಿಲ್ಲ. ಕ್ವಿಂಟಾನ್ ಡಿಕಾಕ್ (10 ರನ್) ಅರೊರಾಗೆ ವಿಕೆಟ್ ಒಪ್ಪಿಸಿದರು. ರಾಹುಲ್ (39ರನ್) ರಸೆಲ್ಗೆ ಬಲಿಯಾದರು. ಮೂರನೆ ವಿಕೆಟ್ಗೆ ಜತೆಗೂಡಿದ ದೀಪಕ್ ಹೂಡಾ (8ರನ್) ಮತ್ತು ಅಯುಷ್ ಬದೋನಿ (29ರನ್) 39 ರನ್ ಜತೆಯಾಟ ನೀಡಿದರು. ದೀಪಕ್ ಹೂಡಾ ನೀಡಿದ ಕ್ಯಾಚ್ ಅನ್ನ ರಮಣ್ದೀಪ್ ಸೊಗಸಾಗಿ ಹಿಡಿದರು. ಆಯೂಷ್ ಬದೋನಿ ನರೈನ್ಗೆ ವಿಕೆಟ್ ಒಪ್ಪಿಸಿದರು. ಮಾರ್ಕಸ್ ಸ್ಟೋಯ್ನಿಸ್ 10 ಮತ್ತು ನಿಕೊಲೊಸ್ ಪೂರಾನ್ 45 ರನ್ ಹೊಡೆದು ಮೊತ್ತ 150ರ ಗಡಿ ದಾಟಿಸುವಲ್ಲಿ ನೆರವಾದರು.
ಕೋಲ್ಕತ್ತಾ ಪರ ಸ್ಟಾರ್ಕ್ 28ಕ್ಕೆ 3, ಅರೋರಾ 34ಕ್ಕೆ 1, ಸುನಿಲ್ ನರೈನ್ 17ಕ್ಕೆ 1 ವಿಕೆಟ್ ಪಡೆದರು.
162 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ಕ್ಲೋಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೈನ್ 6 ರನ್ ಹೊಡೆದರು. ರಘುವವ್ಶಿ 7 ರನ್ ಗಳಿಸಿದರು. ಬೌಂಡರಿಗಳ ಸುರಿಮಳೆಗೈದ ಫಿಲ್ ಸಾಲ್ಟ್ 26 ಎಸೆತದಲ್ಲಿ ಅರ್ಧ ಶತಕ ಹೊಡೆದರು. ಫಿಲ್ ಸಾಲ್ಟ್ 89ರನ್ (47 ಎಸೆತ, 14 ಬೌಂಡರಿ, 3 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ ಅಜೇಯ 38 ರನ್ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು. ಲಕ್ನೊ ಪರ ಮೊಹ್ಸಿನ್ ಖಾನ್ 2 ವಿಕೆಟ್ ಪಡೆದರು. ಫಿಲ್ ಸಾಲ್ಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.