ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
ಬೆಂಗಳೂರು,ಏ.೧೪- ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಶಂಕಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮಹಾಲಕ್ಷ್ಮೀ ಲೇ ಔಟ್‌ನ ನಿವಾಸದಲ್ಲಿ ಬೆಳಿಗ್ಗೆ ೯ ರ ವೇಳೆ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಹಣಕಾಸಿನ ವಿಚಾರದಲ್ಲಿ ಈ ಸಾವಾಗಿದೆ ಎಂದು ಹೇಳಲಾಗುತ್ತಿದೆ. ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಮೃತದೇಹವನ್ನು ಇಡಲಾಗಿದೆ.
ಸೌಂದರ್ಯ ಜಗದೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಕುಟುಂಬಸ್ಥರು ಸ್ಥಳೀಯ ಸುಗುಣ ಆಸ್ಪತ್ರೆಗೆ ಕರೆತಂದರಾದರೂ, ಆಸ್ಪತ್ರೆಗೆ ತರುವಷ್ಟರಲ್ಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಅಪ್ಪು ಪಪ್ಪು,ಸ್ನೇಹಿತರು ಮುಂತಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಬೆಂಗಳೂರಿನಲ್ಲಿ ಜೆಟ್‌ಲಾಗ್ ಪಬ್ ಹೊಂದಿದ್ದ ಜಗದೀಶ್ ಅವರು ಬಿಲ್ಡರ್ ಕೂಡ ಆಗಿದ್ದರು.
ಚಾಲೆಂಜಿಂಗ್ ಸ್ಟಾರ್’ ದರ್ಶನ್, ರಾಕ್‌ಲೈನ್ ವೆಂಕಟೇಶ್ ಮುಂತಾದ ಸೆಲೆಬ್ರಿಟಿಗಳ ಜೊತೆ ಅವರು ಆಪ್ತ ಒಡನಾಟ ಹೊಂದಿದ್ದರು.
ಆನೇಕ ವಿವಾದಗಳ ಕಾರಣದಿಂದಲೂ ಸೌಂದರ್ಯ ಜಗದೀಶ್ ಅವರು ಆಗಾಗ ಸುದ್ದಿ ಆಗಿದ್ದರು. ನೆರೆಹೊರೆಯವರ ಜೊತೆ ಅವರ ಕುಟುಂಬದವರು ಗಲಾಟೆ ಮಾಡಿಕೊಂಡಿದ್ದು ಕೂಡ ಭಾರಿ ವಿವಾದ ಸೃಷ್ಟಿಸಿತ್ತು.
ಕೆಲವೇ ತಿಂಗಳ ಹಿಂದೆ ‘ಕಾಟೇರ’ ಚಿತ್ರತಂಡದವರು ‘ಜೆಟ್‌ಲಾಗ್’ ಪಬ್‌ನಲ್ಲಿ ರಾತ್ರಿ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪ ಕೂಡ ಕೇಳಿಬಂದಿತ್ತು. ಆ ಬಳಿಕ ೨೫ ದಿನಗಳ ಕಾಲ ರೆಸ್ಟೋ ಬಾರ್ ಲೈಸೆನ್ಸ್ ರದ್ದು ಮಾಡಲಾಗಿತ್ತು.
ಮೂಲಗಳ ಪ್ರಕಾರ, ಕೆಲವೇ ದಿನಗಳ ಹಿಂದೆ ಸಾಲ ನೀಡಿದ್ದ ಬ್ಯಾಂಕ್ ಅಧಿಕಾರಿಗಳು ಸೌಂದರ್ಯ ಜಗದೀಶ್ ಅವರ ಮನೆಯನ್ನು ಸೀಜ್ ಮಾಡಿದ್ದರು ಎನ್ನಲಾಗಿದೆ.
ಒಟ್ಟಿನಲ್ಲಿ ಯಾವ ಕಾರಣಕ್ಕಾಗಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಉದ್ಯಮಿ ಆಗಿದ್ದ ಸೌಂದರ್ಯ ಜಗದೀಶ್ ಅವರು ತಮ್ಮ ಪುತ್ರ ಸ್ನೇಹಿತ್‌ನನ್ನು ಚಿತ್ರರಂಗಕ್ಕೆ ಪರಿಚಯಿಸಿ ಹಲವು ಸಿನಿಮಾಗಳ ವಿತರಣೆಯನ್ನೂ ಅವರು ಮಾಡಿದ್ದರು.ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ಜೊತೆ ಅವರು ಸ್ನೇಹ ಹೊಂದಿ ಇತ್ತಿಗಷ್ಟೇ ಪ್ರಿಯಾಂಕಾ ಉಪೇಂದ್ರ ಅವರು ಆಯೋಜಿಸಿದ್ದ ಹೋಳಿ ಸಂಭ್ರಮದಲ್ಲಿ ಸೌಂದರ್ಯ ಜಗದೀಶ್ ಭಾಗಿ ಆಗಿದ್ದರು.
ಸೌಂದರ್ಯ ಜಗದೀಶ್ ಅವರ ಸಾವಿನ ಕುರಿತಂತೆ ತನಿಖೆ ನಡೆಯಲಿದೆ. ಆ ಬಳಿಕ ಅವರ ನಿಧನಕ್ಕೆ ಸ್ಪಷ್ಟ ಕಾರಣ ಏನೆಂಬುದು ಗೊತ್ತಾಗಲಿದೆ. ಅವರ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ.