ನಿರ್ಮಲಾನಂದ ಶ್ರೀಗಳು ರಾಜಕಾರಣ ಮಾಡುವವರಲ್ಲ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೧೦:ಆದಿಚುಂದನಗಿರಿ ಮಠಾಧೀಶರಾದ ನಿರ್ಮಲಾನಂದ ಶ್ರೀಗಳು ರಾಜಕಾರಣ ಮಾಡುವವರಲ್ಲ, ಅವರು
ಬುದ್ಧಿವಂತರಾಗಿದ್ದಾರೆ ಅವರಿಗೆ ಎಲ್ಲವೂ ಗೊತ್ತಿದೆ. ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಿಜೆಪಿ ಜೆಡಿಎಸ್ ನಾಯಕರು ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದರು. ಸ್ವಾಮೀಜಿವರು ಬಂದವರಿಗೆಲ್ಲ ಹಾರ ಹಾಕುತ್ತಾರೆ. ಆರ್ಶೀವಾದ ಮಾಡಿ ಕಳುಹಿಸುತ್ತಾರೆ. ಏನೇ ಇರಲಿ ಸ್ವಾಮೀಜಿ ಬುದ್ಧಿವಂತರು, ಇತಿಹಾಸ ಅವರಿಗೆ ಗೊತ್ತಿದೆ. ಈ ಹಿಂದೆ ಮಠವನ್ನೇ ಒಡೆದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಒಕ್ಕಲಿಗರು ದಡ್ಡರಲ್ಲ ಎಂದು ಡಿಕೆಶಿ ಹೇಳಿದರು.
ಒಕ್ಕಲಿಗ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಇಳಿಸಿದವರು ಯಾರು ಎಂಬುದನ್ನು ಕುಮಾರಸ್ವಾಮಿ ಅವರು ಅರ್ಥಮಾಡಿಕೊಳ್ಳಬೇಕು ಸಿದ್ಧಾಂತವನ್ನೇ ಮಾಡಿಕೊಂಡು ತಮ್ಮನ್ನು ಅಧಿಕಾರದಿಂದ ಇಳಿಸಿದವರ ಜತೆ ಸೇರಿ ಒಕ್ಕಲಿಗ ಮಠಕ್ಕೆ ಭೇಟಿ ಕೊಟ್ಟು ಅವರಿಗೆ ಆರ್ಶಿವಾದ ಕೊಡಿಸಿರುವುದು ಕುಮಾರಸ್ವಾಮಿ ಅವರ ಅನುಕೂಲ ಸಿಂಧು ರಾಜಕಾರಣವನ್ನು ಜಗಜ್ಜಾಹೀರು ಮಾಡಿದೆ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದು ಜೆಡಿಎಸ್‌ಗೆ ಸರಿ ಹೊಂದುತ್ತದೆಯೇ ಕುಮಾರಸ್ವಾಮಿಲೆಕ್ಕಕ್ಕಿಲ್ಲ ಬಿಡಿ ಪಾಪ ದೇವೇಗೌಡರಿಗೆ ಈ ರೀತಿ ಪರಿಸ್ಥಿತಿ ಬರಬಾರದಿತ್ತು. ತಮ್ಮ ಅಳಿಯನನ್ನೇ ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಇವರದು ಸಿದ್ಧಾಂತ ರಾಜಕಾರಣವೇ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಈ ಚುನಾವಣೆಯಲ್ಲಿ ಜೆಡಿಎಸ್‌ನ ಅಭ್ಯರ್ಥಿಗಳು ಸೋಲುತ್ತಾರೆ. ಹಾಗೆಯೇ ಬಿಜೆಪಿ ಟಿಕೆಟ್ ಮೇಲೆ ಚುನಾವಣಾ ಕಣಕ್ಕಿಳಿದಿರುವ ಜೆಡಿಎಸ್ ಕುಟುಂಬದ ಅಭ್ಯರ್ಥಿಯೂ ಸೋಲುತ್ತಾರೆ. ಜನ ದಡ್ಡರಲ್ಲ ಜನಕ್ಕೆ ಎಲ್ಲವೂ ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.