೨೮ ಕ್ಷೇತ್ರಗಳಲ್ಲಿ ಮೈತ್ರಿಕೂಟಕ್ಕೆ ಗೆಲುವು: ಬಿವೈವಿ
ಬೆಂಗಳೂರು,ಏ.೧೦:ರಾಜ್ಯದ ೨೮ ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿಂದು ಗುಲ್ಬರ್ಗಾದ ಮುಖಂಡರುಗಳಾದ ನಿತೀನ್‌ಗುತ್ತೇದಾರ್ ಮತ್ತು ಅವರ ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ೧೦ ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಜನ ಮೆಚ್ಚಿದ್ದಾರೆ. ಮೋದಿ ಅವರ ಜನಪ್ರಿಯತೆ ಉತ್ತುಂಗದಲ್ಲಿದೆ. ೧೦ ವರ್ಷಗಳಲ್ಲಿ ಮೋದಿ ಅವರು ನುಡಿದಂತೆ ನಡೆದಿದ್ದಾರೆ. ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ ಎಂದರು.
ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪದೊಂದಿಗೆ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಮೋದಿ ಅವರೂ ಸಹ ಒಂದು ದಿನವೂ ವಿಶ್ರಾಂತಿ ಇಲ್ಲದೆ ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯಿಯ ಅಂತ್ಯ ಸಂಸ್ಕಾರಕ್ಕೆ ಕೇವಲ ೨ ಗಂಟೆ ಕಾಲ ತೆರಳಿದ ಅತ್ಯಂತ ವಿಶಿಷ್ಟ ವ್ಯಕ್ತಿ ಎಂದು ಅವರು ಹೇಳಿದರು.
ಇಂದು ಪಕ್ಷ ಸೇರ್ಪಡೆಯಾಗಿರುವ ನಿತೀನ್‌ಗುತ್ತೇದಾರ್ ಅವರನ್ನು ಪಕ್ಕಕ್ಕೆ ಆತ್ಮೀಯವಾಗಿ ಬರಮಾಡಿಕೊಂಡು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸಕರಾಗಿದ್ದ ಉಮೇಶ್‌ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಯಿಂದ ಸ್ಪರ್ಧಿಸಿ ಗುಲ್ಬರ್ಗಾ ಕ್ಷೇತ್ರದಲ್ಲಿ ಗೆದ್ದಿದ್ದರು ಈ ಬಾರಿಯೂ ಅವರು ಗೆಲ್ಲುತ್ತಾರೆ. ನಿತೀನ್ ಅವರ ಸೇರ್ಪಡೆಯಿಂದ ಗುಲ್ಬರ್ಗಾ ಕ್ಷೇತ್ರದಲ್ಲಿ ಪಕ್ಷದ ಬಲ ಹೆಚ್ಚಿದೆ ಎಂದರು.
ಬಿಜೆಪಿ ಜೆಡಿಎಸ್ ಒಂದು ಕುಟುಂಬದಂತೆ ಎಲ್ಲರೂ ಸೇರಿ ಮೈತ್ರಿಕೂಟದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಿತೀನ್‌ಗುತ್ತೇದಾರ್ ಅವರು ಬಿಜೆಪಿ ಸೇರಲು ಮತ್ತು ಸಂಘಟನೆ ಮಾಡಲು ಅವಕಾಶ ಸಿಕ್ಕಿದೆ. ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿ ಮೋದಿ ಅವರ ಕೈ ಬಲಪಡಿಸುವ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಟಿ ರವಿ, ರಾಜ್ಯಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಮಾಜಿ ಸಚಿವ ಅರಗಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಕಲಬುರಗಿ ಜಿಲ್ಲಾಧ್ಯಕ್ಷ ಚಂದ್ರುಪಾಟೀಲ್, ಶಿವರಾಜ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.