ಸಾಮಾಜಿಕ ಜಾಲತಾಣಗಳಲ್ಲಿ ಖಡ್ಗ ಹಿಡಿದು ರೀಲ್ಸ್: ಆರೋಪಿ ಬಂಧನ
ಕಲಬುರಗಿ:ಏ.04:ಸಾಮಾಜಿಕ ಜಾಲತಾಣಗಳಲ್ಲಿ ಖಡ್ಗ ಹಿಡಿದುಕೊಂಡು ರೀಲ್ಸ್ ಮಾಡಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಠಾಣೆಯ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಗೆ ರಾಮು ಅಲಿಯಾಸ್ ರಮೇಶ್ ತಂದೆ ಶ್ರೀಶೈಲ್ ಇಂಜಳ್ಳಿಕರ್ (30) ಎಂದು ಗುರುತಿಸಲಾಗಿದೆ.
ಕಳೆದ ಬುಧವಾರದಂದು ರಾತ್ರಿ ಹತ್ತು ಗಂಟೆ ಸುಮಾರಿಗೆ ಸೇಡಂ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಛೋಟಿಗಿರಣಿಯ ರೈಲ್ವೆ ಸೇತುವೆ ಕೆಳಗೆ ಇಂದಿರಾನಗರದ ನಿವಾಸಿ ರಾಮು ಅಲಿಯಾಸ್ ರಮೇಶ್ ತಂದೆ ಶ್ರೀಶೈಲ್ ಇಂಜಳ್ಳಿಕರ್ ಎಂಬಾತನು ಖಡ್ಗ ಹಿಡಿದುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ ಎಂಬ ಮಾಹಿತಿಯ ಮೇರೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಎಮ್. ಹಾಕೆ, ಹೆಚ್ಚುವರಿ ವರಿಷ್ಠಾಧಿಕಾರಿ ಶ್ರೀನಿಧಿ, ಡಿಎಸ್‍ಸಿ ಸಂಗಮನಾಥ್ ಎಸ್. ಹಿರೇಮಠ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ್ ಸಿಲವೇರಿ, ಪಿಎಸ್‍ಐ ತಿರುಮಲೇಶ್, ಚಂದ್ರಶೇಖರ್ ನಿರಣೆ, ಎಎಸ್‍ಐ ತುಳಜಪ್ಪ ಅವರು ಕಾರ್ಯಾಚರಣೆ ಕೈಗೊಂಡು ಆರೋಪಿ ಇಂಜಳ್ಳಿಕರ್‍ನಿಗೆ ಬಂಧಿಸಿದರು.
ಬಂಧಿತ ವ್ಯಕ್ತಿಯಿಂದ ಖಡ್ಗವನ್ನು ವಶಪಡಿಸಿಕೊಂಡಿದ್ದು, ಈ ಕುರಿತು ಸೇಡಂ ಪೋಲಿಸ್ ಠಾಣೆಯಲ್ಲಿ ಆಯುಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.