ರಷ್ಯಾ ವಿರುದ್ಧ ಹ್ಯಾಕಿಂಗ್ ಸಮರ
ಕೀವ್ (ಉಕ್ರೇನ್), ಎ.೪- ಉಕ್ರೇನ್ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಸೈಬರ್ ದಾಳಿ ನಡೆಸುತ್ತಿರುವ ಜಾಗರೂಕ ಹ್ಯಾಕರ್‌ಗಳ ತಂಡಕ್ಕೆ ಇದೀಗ ಉಕ್ರೇನ್ ಮಿಲಿಟರಿ ಕೃತಜ್ಞತೆಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಒನ್ ಫಿಸ್ಟ್ ಹ್ಯಾಕಿಂಗ್ ತಂಡವು ರಷ್ಯಾದ ಮಿಲಿಟರಿ ಸಂಸ್ಥೆಗಳಿಂದ ಭಾರೀ ಪ್ರಮಾಣದ ದಾಖಲೆಗಳನ್ನು ಕದ್ದಿದ್ದು, ಅಲ್ಲದೆ ಅಲ್ಲಿನ ಸೈನಿಕರ ಮೇಲೆ ಕಣ್ಣಿಡಲು ಕ್ಯಾಮರಾಗಳನ್ನು ಕೂಡ ಹ್ಯಾಕ್ ಮಾಡಿದೆ.
ಒಂದೆಡೆ ರಣರಂಗದಲ್ಲಿ ಯುದ್ಧ ನಡೆಯುತ್ತಿದ್ದರೆ ಮತ್ತೊಂದೆಡೆ ಅಂತರ್ಜಾಲಗಳ ಮೂಲಕ ಯುದ್ಧ ನಡೆಸಲಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಅದರಲ್ಲೂ ಹ್ಯಾಕರ್‌ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿರುವುದು ಕಳವಳಕಾರಿ ಸಂಗತಿ ಎಂಬ ಮಾತು ಸದ್ಯ ಎಲ್ಲೆಡೆಯಿಂದ ಕೇಳಿಬರುತ್ತಿದೆ. ವೋಲ್ಟೇಜ್ ಎಂಬ ಹ್ಯಾಕರ್‌ಗಳಲ್ಲಿ ಒಬ್ಬರು ಅಮೆರಿಕಾದಲ್ಲಿರುವ ತನ್ನ ಮನೆಯಿಂದ ಹ್ಯಾಕ್‌ಗಳನ್ನು ಸಂಯೋಜಿಸುತ್ತಿದ್ದು, ಸದ್ಯ ಇಂಥ ಬೆಳವಣಿಗೆ ಹಲವೆಡೆಗಳಲ್ಲಿ ನಡೆಯುತ್ತಿದೆ. ಮಿಚಿಗನ್‌ನ ಐಟಿ ಉದ್ಯೋಗಿ ಕ್ರಿಸ್ಟೋಫರ್ ಕಾರ್ಟ್ರೈಟ್ ಎಂಬಾತ ಕೂಡ ರಷ್ಯಾ ವಿರುದ್ಧ ಸೈಬರ್ ದಾಳಿಯಲ್ಲಿ ನಿರತರಾಗಿದ್ದು, ಉಕ್ರೇನ್‌ನ ಕೃತಜ್ಞತಾ ಪತ್ರದಿಂದ ತನ್ನ ಕಾರ್ಯವನ್ನು ಗುರುತಿಸಿಕೊಳ್ಳಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಬ್ರಿಟನ್, ಯುಎಸ್ ಮತ್ತು ಪೋಲೆಂಡ್ ಸೇರಿದಂತೆ ಎಂಟು ವಿಭಿನ್ನ ದೇಶಗಳ ಹ್ಯಾಕರ್‌ಗಳಿಂದ ಒನ್ ಫಿಸ್ಟ್ ಎಂಬ ಸಂಘಟನೆ ರಚಿಸಲಾಗಿದೆ. ಇವರು ಈಗಾಗಲೇ ಹತ್ತಕ್ಕೂ ಅಧಿಕ ಸೈಬರ್ ದಾಳಿಗಳನ್ನು ನಡೆಸಿದ್ದಾರೆ. ಅಲ್ಲದೆ ಅವರು ನಡೆಸುವ ಪ್ರತಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಸಂಭ್ರಮಾಚರಿಸಿಕೊಳ್ಳುತ್ತಿದ್ದಾರೆ. ಇನ್ನು ಸೇನೆಯ ಪ್ರಮುಖ ಚಟುವಟಿಕೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಮಹತ್ವದ ಕೊಡುಗೆಗಾಗಿ ಪ್ರಮಾಣಪತ್ರಗಳನ್ನು ಹ್ಯಾಕರ್‌ಗಳಿಗೆ ಕಳುಹಿಸಲಾಗಿದೆ. ಉಕ್ರೇನ್‌ನ ವಾಯುಗಾಮಿ ಆಕ್ರಮಣ ಪಡೆಗಳ ಕಮಾಂಡರ್ ಅವರು ಪತ್ರಕ್ಕೆ ಸಹಿ ಹಾಕಿದ್ದಾರೆ.