ತೈವಾನ್ ಭೂಕಂಪ: ಸಾವಿರ ಮಂದಿಗೆ ಗಾಯ
ತೈಪೆ, ಎ.೪- ಪೂರ್ವ ತೈವಾನ್‌ನಲ್ಲಿ ಸಂಭವಿಸಿರುವ ಸುಮಾರು ೭.೨ ತೀವ್ರತೆಯ ಭೂಕಂಪದಲ್ಲಿ ಮೃತರ ಸಂಖ್ಯೆ ೯ ಆಗಿದ್ದರೂ ಗಾಯಗೊಂಡವರ ಸಂಖ್ಯೆ ಇದೀಗ ೧೦೦೦ ದಾಟಿದೆ. ಘಟನೆಯಲ್ಲಿ ೩೮ ಕಾರ್ಮಿಕರು ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರೆದಿದೆ.
ಗ್ರಾಮೀಣ ಮತ್ತು ವಿರಳ ಜನಸಂಖ್ಯೆಯ ಪೂರ್ವ ಕೌಂಟಿಯಾದ ಹುವಾಲಿಯನ್ ಮೇಲೆ ಬುಧವಾರ ಬೆಳಗ್ಗೆ ಭೂಕಂಪ ಸಂಭವಿಸಿದ್ದು, ಸುಮಾರು ೭.೨ ತೀವ್ರತೆ ಹೊಂದಿತ್ತು. ಪರಿಣಾಮ ರಾಜಧಾನಿ ತೈಪೆಯಲ್ಲೂ ಕೂಡ ಹಲವು ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಸುಮಾರು ೨೫ ವರ್ಷಗಳಲ್ಲೇ ತೈವಾನ್‌ನಲ್ಲಿ ಕಂಡುಬಂದಿರುವ ಅತ್ಯಂತ ಭೀಕರ ಭೂಕಂಪದ ಪರಿಣಾಮ ಹಲವು ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಸದ್ಯ ಘಟನೆಯಲ್ಲಿ ೯ ಮಂದಿ ಮೃತಪಟ್ಟಿದ್ದು, ಆದರೆ ಗಾಯಾಳುಗಳ ಸಂಖ್ಯೆ ಏರುತ್ತಲೇ ಇದೆ. ಮೂಲಗಳ ಪ್ರಕಾರ ಇದೀಗ ಸುಮಾರು ೧ ಸಾವಿರ ಮಂದಿ ಗಾಯಗೊಂಡಿದ್ದು, ಈ ನಡುವೆ ಇದೀಗ ರಾಷ್ಟ್ರೀಯ ಉದ್ಯಾನವನದ ಹೋಟೆಲ್‌ಗೆ ತೆರಳುತ್ತಿದ್ದ ೩೮ ಕಾರ್ಮಿಕರು ನಾಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ತೈವಾನ್‌ನ ಅಗ್ನಿಶಾಮಕ ಇಲಾಖೆಯು ಗಾಯಗಳ ಸಂಖ್ಯೆ ೧೦೩೮ಕ್ಕೆ ತಲುಪಿದೆ ಎಂದು ತಿಳಿಸಿದೆ. ಒಟ್ಟು ಕಾಣೆಯಾದವರ ಸಂಖ್ಯೆ ೫೨ ರಷ್ಟಿದೆ. ಟಾರೊಕೊ ರಾಷ್ಟ್ರೀಯ ಉದ್ಯಾನವನದ ರೆಸಾರ್ಟ್‌ಗೆ ಹೋಗುತ್ತಿದ್ದ ಸುಮಾರು ಹನ್ನೆರಡು ಹೋಟೆಲ್ ಕೆಲಸಗಾರರನ್ನು ಪತ್ತೆಹಚ್ಚಲಾಗಿದೆ. ಆದರೆ ಇನ್ನೂ ೩೮ ಮಂದಿ ಕಾಣೆಯಾಗಿದ್ದಾರೆ ಎಂದು ಪಟ್ಟಿ ಮಾಡಲಾಗಿದೆ. ಅಲ್ಲದೆ ಎರಡು ಕಲ್ಲಿದ್ದಲು ಗಣಿಗಳಲ್ಲಿ ೭೦ಕ್ಕೂ ಹೆಚ್ಚು ಗಣಿ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತೈವಾನ್ ನಲ್ಲಿ ವಾಸಿಸುವ ಎಲ್ಲ ಭಾರತೀಯರು ಸ್ಥಳೀಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ಹಾಗೂ ಮಾರ್ಗಸೂಚಿಯನ್ನು ಪಾಲಿಸುವಂತೆ ಭಾರತೀಯ ತೈಪೆ ಅಸೋಸಿಯೇಷನ್ ಮನವಿ ಮಾಡಿದೆ. ಭಾರತ ಚಾಚಿರುವ ಸಹಾಯ ಹಸ್ತಕ್ಕೆ ತೈವಾನ್‌ನ ನಿರ್ಗಮಿತ ಅಧ್ಯಕ್ಷ ಸಾಯಿ ಇಂಗ್-ವೆನ್ ಮತ್ತು ಚುನಾಯಿತ ಅಧ್ಯಕ್ಷ ಲೀ ಚಿಂಗ್ ತೇ ಕೃತಜ್ಞತೆ ಸಲ್ಲಿಸಿದ್ದಾರೆ. ಬುಧವಾರ ಬೆಳಿಗ್ಗೆ ೮ ಗಂಟೆ (ಸ್ಥಳೀಯ ಕಾಲಮಾನ) ಸಂಭವಿಸಿದ ಭೂಕಂಪ ತೈವಾನ್‌ನ ಹುವಾಲಿಯನ್ ನಗರದ ದಕ್ಷಿಣಕ್ಕೆ ೧೮ ಕಿ.ಮೀ ದೂರದಲ್ಲಿ, ೩೪.೮ ಕಿ.ಮೀ ಆಳದಲ್ಲಿ ಕೇಂದ್ರೀಕೃತಗೊಂಡಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಇಲಾಖೆ ಮಾಹಿತಿ ನೀಡಿದೆ. ಹುವಾಲಿಯನ್‌ನಲ್ಲಿ ೧೪ ಸೇರಿದಂತೆ ಕನಿಷ್ಟ ೨೬ ಕಟ್ಟಡಗಳು ನೆಲಸಮಗೊಂಡಿದ್ದು ೨೦ ಮಂದಿ ಕಟ್ಟಡದ ಅವಶೇಷಗಳಡಿ ಸಿಕ್ಕಿಬಿದ್ದಿರುವುದಾಗಿ ರಾಯ್ಟರ್ಸ್ ವರದಿ ಮಾಡಿತ್ತು. ಫಿಲಿಪ್ಪೀನ್ಸ್‌ನ ಕರಾವಳಿ ತೀರದ ಪ್ರಾಂತಗಳಲ್ಲಿ ತಗ್ಗುಪ್ರದೇಶದ ನಿವಾಸಿಗಳು ಎತ್ತರದ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಫಿಲಿಪ್ಪೀನ್ಸ್ ಭೂಕಂಪಶಾಸ್ತ್ರ ಇಲಾಖೆ ಎಚ್ಚರಿಕೆ ನೀಡಿದೆ. ತೈವಾನ್ ಕೂಡಾ ತ್ಸುನಾಮಿ ಎಚ್ಚರಿಕೆ ನೀಡಿತ್ತು. ಆದರೆ ತ್ಸುನಾಮಿಯಿಂದ ತೈವಾನ್‌ನಲ್ಲಿ ಯಾವುದೇ ಹಾನಿ, ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ತ್ಸುನಾಮಿ ಅಲೆಯಿಂದ ನಷ್ಟದ ಅಪಾಯದ ಸಾಧ್ಯತೆ ಈಗ ಬಹುತೇಕ ದೂರವಾಗಿದೆ ಎಂದು ಹವಾಯಿ ದ್ವೀಪದ ತ್ಸುನಾಮಿ ಎಚ್ಚರಿಕೆ ಕೇಂದ್ರ ಹೇಳಿದೆ. ಚೀನಾದ ಶಾಂಘೈ, ಫುಝೋವ್, ಕ್ವಾನ್‌ಝೋವ್ ಮತ್ತು ನಿಂಗ್ಡೆ ನಗರಗಳಲ್ಲೂ ನೆಲ ನಡುಗಿದ ಅನುಭವವಾಗಿದೆ.