ತೀವ್ರಗೊಂಡ ಇಸ್ರೇಲ್ ದಾಳಿ: ನೆರವು ನಿಲ್ಲಿಸಿದ ಡಬ್ಲ್ಯುಸಿಕೆ
ಗಾಜಾ, ಎ.೪- ಇಸ್ರೇಲ್‌ನ ಭೀಕರ ದಾಳಿಯ ನಡುವೆಯೂ ಗಾಜಾದಲ್ಲಿ ಸಂತ್ರಸ್ತ ನಾಗರಿಕರಿಗೆ ಆಹಾರ ಪೂರೈಸುತ್ತಿದ್ದ ವರ್ಲ್ಡ್ ಸೆಂಟ್ರಲ್ ಕಿಚನ್ (ಡಬ್ಲ್ಯುಸಿಕೆ) ಸಂಸ್ಥೆ ಇದೀಗ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇಸ್ರೇಲ್ ದಾಳಿಗೆ ಡಬ್ಲ್ಯುಸಿಕೆಯ ಏಳು ಮಂದಿ ಸಹಾಯಕ ಸಿಬ್ಬಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಗಾಜಾ ನಾಗರಿಕರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಭೀಕರ ಪರಿಣಾಮ ಉಂಟು ಮಾಡಲಿದೆ ಎಂದು ಹೇಳಲಾಗಿದೆ.
ಇದರ ನಡುವೆಯೇ ಅಮೆರಿಕಾ ಮೂಲದ ಸಂಸ್ಥೆ ‘ಅನೆರಾ’ ಕೂಡ ತನ್ನ ಗಾಜಾದಲ್ಲಿ ತನ್ನ ನೆರವು ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಒಂದೆಡೆ ಇಸ್ರೇಲ್ ಪಡೆ ತೀವ್ರ ದಾಳಿ ನಡೆಸುತ್ತಿದ್ದರೆ ಮತ್ತೊಂದೆಡೆ ನಾಗರಿಕರು ನೀರು-ಆಹಾರ ಇಲ್ಲದೆ ಪರಿತಪಿಸುವಂತಾಗಿದೆ. ಈ ಎರಡೂ ನೆರವು ಸಂಸ್ಥೆಗಳು ಗಾಜಾದಲ್ಲಿ ಸುಮಾರು ವಾರದಲ್ಲಿ ೨೦ ಲಕ್ಷ ಭೋಜನಾ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದರು. ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ತೀವ್ರ ರೀತಿಯ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಡಬ್ಲ್ಯುಸಿಕೆ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿರುವುದರ ಹಿನ್ನೆಲೆಯಲ್ಲಿ ಸೈಪ್ರಸ್‌ನಿಂದ ಸಾಗರ ಮೂಲಕ ಬರುತ್ತಿದ್ದ ನೆರವು ಕೂಡ ಇದೀಗ ಸ್ಥಗಿತಗೊಂಡಂತಾಗಿದೆ. ಆಹಾರದ ಕೊರತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕಳೆದ ತಿಂಗಳು ಗಾಜಾದಲ್ಲಿ ಈ ಸಂಸ್ಥೆ ತನ್ನ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ಇತ್ತೀಚಿಗಿನ ದಿನಗಳಲ್ಲಿ ಇಸ್ರೇಲ್ ತನ್ನ ದಾಳಿ ತೀವ್ರಗೊಳಿಸಿರುವುದು ನೆರವು ಸಂಸ್ಥೆಗಳ ಸಿಬ್ಬಂದಿಯ ಕಾರ್ಯಕ್ಕೆ ತೊಡಕಾಗಿದೆ. ಇದೇ ಹಿನ್ನೆಲೆಯಲ್ಲಿ ಡಬ್ಲ್ಯುಸಿಕೆ ಸಂಸ್ಥೆಯ ಏಳು ಮಂದಿ ಸಹಾಯಕ ಸಿಬ್ಬಂದಿ ಮೃತಪಟ್ಟಿದ್ದರು. ಡಬ್ಲ್ಯುಸಿಕೆ ಸಂಸ್ಥೆಯು ದೇರ್ ಅಲ್-ಬಾಲಾಹ್‌ನಲ್ಲಿರುವ ಗೋದಾಮಿನಲ್ಲಿ ಬಾರ್ಜ್‌ನಿಂದ ೧೦೦ ಟನ್‌ಗಳಿಗಿಂತ ಹೆಚ್ಚು ಆಹಾರವನ್ನು ಅನ್‌ಲೋಡ್ ಮಾಡಿದ ಬಳಿಕ ಸಂಸ್ಥೆಯ ಬೆಂಗಾವಲು ಪಡೆಗೆ ದಾಳಿ ನಡೆಸಲಾಗಿತ್ತು.