ಪ್ರಸಕ್ತ ಸಾಲಿನಲ್ಲಿ ೧೨,೩೦೦ ಕಿ.ಮೀ ಹೆದ್ದಾರಿ ನಿರ್ಮಾಣ
ನವದೆಹಲಿ,ಏ.೩- ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ೨೦೨೩-೨೪ರಲ್ಲಿ ಸುಮಾರು ೧೨,೩೦೦ ಕಿಮೀ ನಷ್ಟು ಮುಟ್ಟಿದ್ದು ದಿನಕ್ಕೆ ಸುಮಾರು ೩೪ ಕಿಮೀನಷ್ಟು ಉದ್ದದ ರಸ್ತೆ ನಿರ್ಮಾಣ ಮಾಡಲಾಗಿದೆ.ದೇಶದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಉದ್ದದ ಮಾರ್ಗ ನಿರ್ಮಾಣ ಮಾಡಲಾಗಿದೆ.
ಇದಕ್ಕೂ ಮುನ್ನ ೨೦೨೦-೨೧ರಲ್ಲಿ ಇದುವರೆಗಿನ ಅತಿ ಹೆಚ್ಚು ಅಂದರೆ ೧೩,೩೨೭ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿತ್ತು. ಆ ವರ್ಷ ದಿನವೊಂದಕ್ಕೆ ೩೬.೫ ಕಿ.ಮೀ ಉದ್ದದ ಮಾರ್ಗ ನಿರ್ಮಾಣ ಮಾಡಲಾಗಿತ್ತು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ವಿಶಾಲವಾದ ಹೆದ್ದಾರಿಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ೬,೫೪೪ ಕಿಮೀ ಗುರಿಯ ವಿರುದ್ಧ ೬,೬೪೪ ಕಿಮೀಗಳಲ್ಲಿ ಗರಿಷ್ಠ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ
೨೦೨೨-೨೩ ರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿದ ೫,೫೪೪ ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಗೆ ಹೋಲಿಸಿದರೆ ಸುಮಾರು ಶೇಕಡಾ ೨೦ ರಷ್ಟು ಹೆಚ್ಚಳವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
೨೦೨೩-೨೪ ರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದ ಬಂಡವಾಳ ವೆಚ್ಚ ೨೨-೨೩ ರ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇಕಡಾ ೨೦ರಷ್ಟು ಹೆಚ್ಚು, ೨ ಕೋಟಿ ರೂ.ಗಿಂತ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಹೆದ್ದಾರಿ ಅಭಿವೃದ್ಧಿಗೆ ಖರ್ಚು ಮಾಡುವ ಪ್ರಸ್ತುತ ಪ್ರವೃತ್ತಿ ಇತ್ತೀಚಿನ ವರ್ಷದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮುಂದಿನ ಒಂದು ದಶಕದವರೆಗೆ ಮುಂದುವರಿಯುವ ಸಾಧ್ಯತೆಯಿದೆ.
ಕಳೆದ ೧೦ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಎರಡು ಪಟ್ಟು ಹೆಚ್ಚಳವನ್ನು ಪರಿಗಣಿಸಿ ಹೆದ್ದಾರಿ ವಿಸ್ತರಣೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ಕೇಂದ್ರ ಭೂಸಾರಿಗೆ ಸಚಿವಾಲಯ ತಿಳಿಸಿದೆ.
೨೦೩೭ ರ ವೇಳೆಗೆ ೮೯,೯೦೦ ಕಿಮೀ ಮತ್ತು ೨೦೪೭ ರ ವೇಳೆಗೆ ೧.೨೭ ಲಕ್ಷ ಕಿಮೀ ತಲುಪುತ್ತದೆ. ಹೆದ್ದಾರಿ ವಿಸ್ತರಣೆಗಳನ್ನು ಸಮರ್ಥವಾಗಿ ನಿರ್ವಹಿಸಲು ತರಬೇತಿ ಪಡೆದ ಮಾನವಶಕ್ತಿಯ ಅಗತ್ಯವಿದಲಿದೆ ಎಂದು ಹೇಳಲಾಗಿದೆ.