ಪತ್ನಿಯಿಂದ ಕುನಾಲ್ ಕಪೂರ್‌ಗೆ ವಿಚ್ಛೇದನ
ದೆಹಲಿ,ಏ.೩- ಸೆಲೆಬ್ರಿಟಿ ಚೆಫ್ ಕುನಾಲ್ ಕಪೂರ್‌ಗೆ ದೆಹಲಿ ಹೈಕೋರ್ಟ್ ಪತ್ನಿಯಿಂದ ವಿಚ್ಛೇದನ ನೀಡಿದೆ. ಕುನಾಲ್ ತನ್ನ ಪತ್ನಿ ಕ್ರೂರವಾಗಿ ವರ್ತಿಸುತ್ತಿದ್ದಾಳೆ ಎಂದು ಆರೋಪಿಸಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚ್ಛೇದನ ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕುನಾಲ್ ಕಪೂರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ.
ಸಾರ್ವಜನಿಕವಾಗಿ ಸಂಗಾತಿಯ ವಿರುದ್ಧ ಅಜಾಗರೂಕ, ಮಾನನಷ್ಟ, ಅವಮಾನಕರ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ಕ್ರೌರ್ಯ ಎಂದು ನ್ಯಾಯಾಲಯವು ಗಮನಿಸಿದೆ. ಪ್ರಕರಣದ ಸತ್ಯಾಸತ್ಯತೆಗಳನ್ನು ಅವಲೋಕಿಸಿದರೆ, ಪತ್ನಿ ತನ್ನ ಪತಿಯನ್ನು ಗೌರವ ಮತ್ತು ಸಹಾನುಭೂತಿ ಇಲ್ಲದ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು ನಮಗೆ ಅರ್ಥವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಒಬ್ಬ ಸಂಗಾತಿಯು ಇನ್ನೊಬ್ಬರೊಂದಿಗೆ ಈ ರೀತಿ ವರ್ತಿಸಿದಾಗ, ಅದು ಮದುವೆಯ ಮೂಲತತ್ವವನ್ನು ಅವಮಾನಿಸುತ್ತದೆ. ಅವರು ನೋವಿನಿಂದ ಒಟ್ಟಿಗೆ ಬದುಕಲು ಬಲವಂತವಾಗಿರಲು ಯಾವುದೇ ಕಾರಣವಿಲ್ಲ,ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರನ್ನೊಳಗೊಂಡ ಪೀಠ ಹೇಳಿದೆ.
ಕುನಾಲ್ ಏಪ್ರಿಲ್ ೨೦೦೮ ರಲ್ಲಿ ವಿವಾಹವಾದರು. ೨೦೧೨ ರಲ್ಲಿ ದಂಪತಿಗೆ ಒಬ್ಬ ಮಗ ಜನಿಸಿದ್ದಾನೆ. ಮನವಿಯಲ್ಲಿ ಕುನಾಲ್ ತನ್ನ ಹೆಂಡತಿ ತನ್ನ ಹೆತ್ತವರನ್ನು ಎಂದಿಗೂ ಗೌರವಿಸಲಿಲ್ಲ ಮತ್ತು ತನಗೆ ಅವಮಾನ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.ಕುನಾಲ್ ದೂರದರ್ಶನ ಕಾರ್ಯಕ್ರಮ ಮಾಸ್ಟರ್ ಚೆಫ್ ನಲ್ಲಿ ತೀರ್ಪುಗಾರರಾಗಿದ್ದರು.ಆದರೆ, ನ್ಯಾಯಾಲಯವನ್ನು ದಾರಿ ತಪ್ಪಿಸಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರ ಪತ್ನಿ ಆರೋಪಿಸಿದ್ದಾರೆ. ವಿಚ್ಛೇದನ ಪಡೆಯಲು ಕುನಾಲ್ ಇಲ್ಲಸಲ್ಲದ ಕಥೆಗಳನ್ನು ಹೆಣೆದಿದ್ದಾರೆ ಎಂದು ಆರೋಪಿಸಿದ್ದಾರೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿದ್ದರೂ, ಇಂತಹ ಸಂಘರ್ಷಗಳು ಸಂಗಾತಿಯ ಬಗ್ಗೆ ಅಗೌರವದ ಸ್ವರೂಪವನ್ನು ಪಡೆದಾಗ, ದಾಂಪತ್ಯದ ಪಾವಿತ್ರ್ಯತೆ ಕಳೆದುಹೋಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಮದುವೆಯಾದ ಎರಡೇ ವರ್ಷಗಳಲ್ಲಿ ಕುನಾಲ್ ಸೆಲೆಬ್ರಿಟಿ ಶೆಫ್ ಆದದ್ದು ಅವರ ಕಠಿಣ ಪರಿಶ್ರಮ ಮತ್ತು ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಕೋರ್ಟ್ ಗಮನಿಸಿದೆ.
ಮೇಲಿನ ಸಂಗತಿಗಳನ್ನು ಪರಿಗಣಿಸಿ, ನ್ಯಾಯಾಲಯದ ದೃಷ್ಟಿಯಲ್ಲಿ ಇವುಗಳು ದೂರುದಾರರ ಮಾನಹಾನಿಗಾಗಿ ಪ್ರತಿವಾದಿಯು ಮಾಡಿದ ಆರೋಪಗಳು ಮತ್ತು ಅಂತಹ ಆಧಾರರಹಿತ ಆರೋಪಗಳು ಒಬ್ಬರ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆದ್ದರಿಂದ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಪೀಠ ಹೇಳಿದೆ.