ವೃದ್ಧ ತಾಯಿಗೆ ಥಳಿತ: ವಿಡಿಯೋ ವೈರಲ್
ಬುಲಂದ್‌ಶಹರ್,ಏ.೩- ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ವ್ಯಕ್ತಿಯೊಬ್ಬ ಕರುಣೆ -ಕನಿಕರವಿಲ್ಲದೆ ತನ್ನ ವೃದ್ಧ ತಾಯಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಕೋಲು ಹಿಡಿದುಕೊಂಡು ತಾಯಿಯ ಹಿಂದೆ ಓಡುತ್ತಿರುವುದನ್ನು ಕಾಣಬಹುದು.
ರಾತ್ರಿ ೭.೧೫ ರ ಸುಮಾರಿಗೆ ದುರ್ಗೇಶ್ ಶರ್ಮಾ ಎಂಬಾತ ತನ್ನ ವಿಧವೆ ತಾಯಿ ಕೃಷ್ಣಾದೇವಿಯ ಮೇಲೆ ದೌರ್ಜನ್ಯ ಎಸಗಿ ದೊಣ್ಣೆಗಳಿಂದ ಥಳಿಸುತ್ತಿದ್ದ ವಿಡಿಯೋ ಇದಾಗಿದೆ.
ಅಷ್ಟರಲ್ಲಿ ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಗ್ರಾಮಸ್ಥರು ಆರೋಪಿ ಮಗನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣವು ಸೇಲಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖೈರ್‌ಪುರ ಗ್ರಾಮದದ್ದು. ವೈರಲ್ ವಿಡಿಯೋದಲ್ಲಿ, ವಯಸ್ಸಾದ ಮಹಿಳೆ ತನ್ನ ಮಗ ದುರ್ಗೇಶ್ ಶರ್ಮಾನಿಂದ ಓಡಿಹೋಗುತ್ತಿರುವುದನ್ನು ಕಾಣಬಹುದು. ಮಗ ಕೋಲಿನಿಂದ ತಾಯಿಯನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ದಿಗ್ಭ್ರಮೆಗೊಂಡ ಮಹಿಳೆ ಸಹಾಯ ಕೇಳುತ್ತಾ ಒಂದು ಮನೆಯಿಂದ ಇನ್ನೊಂದು ಮನೆಗೆ ಓಡುತ್ತಾಳೆ. ಅವಳು ತನ್ನ ಮಗನಿಂದ ದೂರ ಓಡಲು ಪ್ರಯತ್ನಿಸುತ್ತಾಳೆ. ಈ ವೇಳೆ ಫುಟ್ ಪಾತ್ ಮೇಲೆ ಜಾರಿ ಬಿದ್ದಿದ್ದಾಳೆ. ಅಷ್ಟರಲ್ಲಿ ಮಗ ಅಲ್ಲಿಗೆ ಬಂದು ತನ್ನ ತಾಯಿಯನ್ನು ಥಳಿಸಲು ಪ್ರಾರಂಭಿಸುತ್ತಾನೆ. ವಿಡಿಯೋದಲ್ಲಿ ದೇವಸ್ಥಾನದ ಗಂಟೆ ಸದ್ದು ಕೂಡ ಕೇಳಿಬಂದಿದೆ.
ದುರ್ಗೇಶ್ ಶರ್ಮಾ ತನ್ನ ತಾಯಿಗೆ ಕೋಲಿನಿಂದ ಹೊಡೆಯುತ್ತಿದ್ದ ಎಂದು ಖೈರ್‌ಪುರ ಗ್ರಾಮದ ನಿವಾಸಿ ಸುಮಿತ್ ಪೊಲೀಸರಿಗೆ ತಿಳಿಸಿದ್ದಾನೆ. ಜನರು ತಾಯಿಯನ್ನು ಬಿಟ್ಟು ಬಿಡುವಂತೆ ಮನವೊಲಿಸಲು ಪ್ರಯತ್ನಿಸಿದಾಗ, ದುರ್ಗೇಶ ಅವರೊಂದಿಗೆ ಜಗಳವಾಡಲು ಪ್ರಾರಂಭಿಸಿ ದುರ್ಗೇಶ್ ಕೆಲವರನ್ನು ಕೋಲಿನಿಂದ ಹೊಡೆಯಲು ಯತ್ನಿಸಿದಾಗ ಜನರು ಆತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.