ಫೋರ್ಬ್ಸ್‌ನಿಂದ ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ
ನ್ಯೂಯಾರ್ಕ್,ಏ.೩-ಫೋರ್ಬ್ಸ್ ೨೦೨೪ ರ ಸೆಲೆಬ್ರಿಟಿ ಬಿಲಿಯನೇರ್‌ಗಳ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಟಾರ್ ವಾರ್ಸ್ ನಿರ್ದೇಶಕ ಜಾರ್ಜ್ ಲ್ಯೂಕಾಸ್ $೫.೫ ಬಿಲಿಯನ್ ಗಳಿಕೆಯೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಸ್ಟೀವನ್ ಸ್ಪೀಲ್ಬರ್ಗ್ ($೪.೮ ಬಿಲಿಯನ್) ಇದ್ದಾರೆ. ಬ್ಯಾಸ್ಕೆಟ್‌ಬಾಲ್ ಆಟಗಾರ ಮೈಕಲ್ ಜೋರ್ಡಾನ್ ಮೂರನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ ನೈಕ್ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದದಿಂದ ಅಪಾರ ಆದಾಯ ಸಂಗ್ರಹವಾಗಿದೆ. ಜನಪ್ರಿಯ ಟಾಕ್ ಶೋ ಹೋಸ್ಟ್ ಓಪ್ರಾ ವಿನ್ಫ್ರೇ, ಮೊದಲ ಕಪ್ಪು ಮಹಿಳಾ ಬಿಲಿಯನೇರ್ ಆಗಿದ್ದಾರೆ. ೨.೮ ಬಿಲಿಯನ್ ಡಾಲರ್ ಆದಾಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಏತನ್ಮಧ್ಯೆ, ರಾಪರ್ ಜೇ-ಝಡ್ ನಿರೀಕ್ಷೆಯಂತೆ ಟಾಪ್-೫ ಸೆಲೆಬ್ರಿಟಿ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ಅವರ ನಿವ್ವಳ ಮೌಲ್ಯ ೨.೫ ಬಿಲಿಯನ್ ಡಾಲರ್. ಮತ್ತು ತನ್ನ ವ್ಯವಹಾರಗಳಿಂದ ದೊಡ್ಡ ಆದಾಯವನ್ನು ಗಳಿಸಿದ ಕಿಮ್ ಕಾರ್ಡಶಿಯಾನ್, ೧.೭ ಬಿಲಿಯನ್ ಡಾಲರ್ ಆದಾಯದೊಂದಿಗೆ ಆರನೇ ಸ್ಥಾನವನ್ನು ಪಡೆದರು. ಜನಪ್ರಿಯ ಪಾಪ್ ಗಾಯಕಿ ರಿಹಾನ್ನಾ $೧.೪ ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಅಲ್ಲದೆ, ಇನ್ನೊಬ್ಬ ಬಾಸ್ಕೆಟ್‌ಬಾಲ್ ತಾರೆ ಲೆಬ್ರಾನ್ ಜೇಮ್ಸ್ ೧.೨ ಬಿಲಿಯನ್ ಡಾಲರ್ ಆದಾಯದೊಂದಿಗೆ ೧೧ ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಪ್ರಕಾರ, ಗಾಯಕಿ ಟೇಲರ್ ಸ್ವಿಫ್ಟ್ ಅಧಿಕೃತವಾಗಿ ೨೦೨೪ ರ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯನ್ನು ಪ್ರವೇಶಿಸಿದ್ದಾರೆ. ಆಕೆಯ ನಿವ್ವಳ ಮೌಲ್ಯವು ಒಂದು ಬಿಲಿಯನ್ ಡಾಲರ್ ಮಾರ್ಕ್ ಮೀರಿದೆ ಮತ್ತು ಗೀತರಚನೆ ಮತ್ತು ಪ್ರದರ್ಶನದ ಆಧಾರದ ಮೇಲೆ ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ಕಲಾವಿದೆ ಎಂದು ಹೇಳಲಾಗುತ್ತದೆ. ಸ್ವಿಫ್ಟ್ $೧.೧ ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ೧೪ ನೇ ಸ್ಥಾನವನ್ನು ಪಡೆದಿದ್ದಾರೆ.