ಇಸ್ರೇಲ್ ದಾಳಿ: ಮೂವರ ಹತ್ಯೆ
ಗಾಜಾ, ಏ.೨- ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾರಿಟಿ ಸಂಸ್ಥೆಯ ನಾಲ್ವರು ಸಹಾಯ ಕಾರ್ಯಕರ್ತರು ಮೃತಪಟ್ಟ ಘಟನೆ ನಡೆದಿದೆ. ದಾಳಿಯ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅತ್ತ ಇಸ್ರೇಲ್ ಪ್ರತಿಕ್ರಿಯೆ ನೀಡಿದೆ.
ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ನಡೆಸಿದ ದಾಳಿಯಲ್ಲಿ ನಮ್ಮ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡ್ ಸೆಂಟ್ರಲ್ ಕಿಚನ್ ಸಂಸ್ಥಾಪಕ ಮತ್ತು ಬಾಣಸಿಗ ಜೋಸ್ ಆಂಡ್ರೆಸ್ ತಿಳಸಿದ್ದಾರೆ. ಅಲ್ಲದೆ ಗಾಝಾದಲ್ಲಿರುವ ಹಮಾಸ್ ನಿಯಂತ್ರಿತ ಮಾಧ್ಯಮ ಕಚೇರಿ ಕೂಡ ದಾಳಿಗೆ ಇಸ್ರೇಲ್ ಕಾರಣ ಎಂದು ದೂಷಿಸಿದೆ. ‘ದೀರ್ ಅಲ್ ಬಲ್ಹಾದ’ ಕರಾವಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ನಾಲ್ವರು ಸಿಬ್ಬಂದಿ ಹಾಗೂ ಅವರ ಪ್ಯಾಲೆಸ್ತೀನ್ ಕಾರ್ ಚಾಲಕನ ಮೃತದೇಹಗಳನ್ನು ಸೆಂಟ್ರಲ್ ಗಾಜಾ ಪಟ್ಟಿಯಲ್ಲಿರುವ ಅಲ್-ಅಕ್ಸಾ ಆಸ್ಪತ್ರೆಗೆ ಕರೆತರಲಾಗಿತ್ತು. ಇವರು ಸಂಚರಿಸುತ್ತಿದ್ದ ಕಾರ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ವೈದ್ಯಕೀಯ ಮೂಲಗಳು ತಿಳಿಸಿದೆ. ಸಾವಿಗೀಡಾದವರಲ್ಲಿ ಸಹಾಯ ಕಾರ್ಯಕರ್ತ ಲಾಲ್ಜಾವ್ಮಿ ‘ಝೋಮಿ’ ಫ್ರಾಂಕ್ಕಾಮ್ ಸೇರಿದ್ದಾರೆ ಎಂದು ಆಸ್ಟ್ರೇಲಿಯನ್ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ದೃಢಪಡಿಸಿದ್ದು, ಅಲ್ಲದೆ ಕುಟುಂಬ ಮತ್ತು ಸ್ನೇಹಿತರಿಗೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅಲ್ಬನೀಸ್, ಗಾಜಾದಲ್ಲಿ ಅಪಾರ ಅಭಾವದಿಂದ ಬಳಲುತ್ತಿರುವ ಜನರಿಗೆ ಈ ಚಾರಿಟಿ ಮೂಲಕ ನೆರವು ನೀಡಲು ಇವರು ಸಾಗರೋತ್ತರ ಸ್ವಯಂಸೇವಕರಾಗಿದ್ದವರು. ಹಾಗಾಗಿ ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದೊಂದು ಎಂದಿಗೂ ಸಂಭವಿಸಬಾರದ ದುರಂತವಾಗಿದೆ ಎಂದು ಅವರು ತಿಳಿಸಿದ್ದಾರೆ.