ಅರುಣಾಚಲದ ೩೦ಸ್ಥಳಗಳ ಬಿಡುಗಡೆ ಮಾಡಿದ ಚೀನಾ
ಬೀಜಿಂಗ್,ಏ.೧- ಭಾರತದ ತೀವ್ರ ವಿರೋಧದ ನಡುವೆಯೂ ಅರುಣಾಚಲ ಪ್ರದೇಶದ ೩೦ ಸ್ಥಳಗಳ ಹೆಸರನ್ನು ಚೀನಾ ಬಿಡುಗಡೆ ಮಾಡಿದೆ.ಭಾರತದ ಅರುಣಾಚಲ ಪ್ರದೇಶದಲ್ಲಿ ಇನ್ನೂ ೩೦ ಪ್ರದೇಶಗಳಿಗೆ ಹೊಸ ಹೆಸರುಗಳನ್ನು ನೀಡಲಾಗಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಸೋಮವಾರ ಹೆಸರುಗಳನ್ನು ಬಿಡುಗಡೆ ಮಾಡಿದೆ. ಚೀನಾದ ಮರುಹೆಸರಿಸಿದ ಸ್ಥಳಗಳಲ್ಲಿ ೧೧ ವಸತಿ ಪ್ರದೇಶಗಳು, ೧೨ ಪರ್ವತಗಳು, ನಾಲ್ಕು ನದಿಗಳು, ಸರೋವರ, ಪರ್ವತ ಪ್ರದೇಶಗಳು ಮತ್ತು ಕೆಲವು ಭೂಮಿ ಇವೆ. ಈ ಹೆಸರುಗಳನ್ನು ಚೈನೀಸ್, ಟಿಬೆಟಿಯನ್ ಮತ್ತು ರೋಮನ್ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಗುರುತಿಸಲಾಗಿದೆ.
ಚೀನಾ ಮತ್ತೊಮ್ಮೆ ತನ್ನ ಉದ್ದಟತನ ತೋರಿದೆ. ಲೈನ್ ಆಫ್ ಕಂಟ್ರೋಲ್ ಉದ್ದಕ್ಕೂ ಈಗ ಇರುವ ಉದ್ವಿಗ್ನ ಪರಿಸ್ಥಿತಿಯ ಸಮಯದಲ್ಲಿ, ಡ್ರ್ಯಾಗನ್ ಹೊಸ ವಿವಾದವನ್ನು ಹುಟ್ಟು ಹಾಕಿದೆ.ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶವು ನಮ್ಮ ನೆರೆಯ ರಾಷ್ಟ್ರವಾದ ಚೀನಾ ಹಲವು ವರ್ಷಗಳಿಂದ ಹಕ್ಕು ಸಾಧಿಸುತ್ತಿದೆ. ಚೀನಾದ ಈ ನಡೆಯನ್ನು ಕೇಂದ್ರ ಸರ್ಕಾರ ಪದೇ ಪದೇ ತಿರಸ್ಕರಿಸುತ್ತಾ, ಇದು ನಮ್ಮ ದೇಶದ ಅವಿಭಾಜ್ಯ ಅಂಗ ಎಂದು ಒತ್ತಾಯಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು ವಿಶ್ವದ ಅತಿ ಉದ್ದದ ದ್ವಿಪಥದ ಸುರಂಗವಾದ ಸೇಲಾ ಸುರಂಗವನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಪ್ರಧಾನಿಯವರ ಭೇಟಿಯನ್ನು ಖಂಡಿಸಿರುವ ಚೀನಾದ ವಿದೇಶಾಂಗ ವಕ್ತಾರ ಹಿರಿಯ ಕರ್ನಲ್ ಜಾಂಗ್ ಕ್ಸಿಯಾಂಗ್ ಅವರು ಅರುಣಾಚಲ ಪ್ರದೇಶ ತಮಗೆ ಸೇರಿದ್ದು ಎಂದು ಪುನರುಚ್ಚರಿಸಿದ್ದಾರೆ. ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಗುರುತಿಸುವುದಾಗಿ ಅಮೆರಿಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.