ರಾಜಕೀಯ ನಿವೃತ್ತಿ ಸುಳಿವು ನೀಡಿದ ಬಿ.ಆರ್. ಪಾಟೀಲ್
ಕಲಬುರಗಿ:ಸೆ.18: ಸ್ವಪಕ್ಷೀಯ ಆಡಳಿತದ ಕುರಿತು ಹಲವಾರು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದ ಆಳಂದ್ ಶಾಸಕ ಮತ್ತು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ್ ಅವರು ನಗರದಲ್ಲಿ ಜರುಗಿದ ಸಚಿವ ಸಂಪುಟ ಸಭೆಯ ಕುರಿತು ಮತ್ತೊಮ್ಮೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಲ್ಲದೇ ರಾಜಕೀಯ ನಿವೃತ್ತಿಯ ಸುಳಿವು ಕೊಡುವ ಮೂಲಕ ರಾಜಕೀಯ ಸಂಚಲನವನ್ನು ಹುಟ್ಟುಬಾಕಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಲಬುರ್ಗಿಯಲ್ಲಿ ನಡೆಸಿದ ಕ್ಯಾಬಿನೆಟ್ ಸಭೆ ಸಮಾಧಾನ ತಂದಿದೆಯೇ ಹೊರತು, ನನಗೆ ತೃಪ್ತಿ ತಂದಿಲ್ಲ ಎಂದು ಮತ್ತೊಮ್ಮೆ ಸರ್ಕಾರದ ವಿರುದ್ಧ ನಿರ್ಭಿಡೆಯಾಗಿ ಅಸಮಧಾನ ಹೊರ ಹಾಕಿದರು.
ಕಲ್ಯಾಣ ಕರ್ನಾಟಕಕ್ಕೆ ಐದು ಸಾವಿರ ಕೋಟಿ ಬರುತ್ತಿರುವುದಕ್ಕೆ ಹಳೆ ಮೈಸೂರು ಭಾಗದವರಿಗೆ ಹೊಟ್ಟೆ ಕಿಚ್ಚು ಶುರುವಾಗಿದೆ. ನಮ್ಮ ಅಭಿವೃದ್ಧಿಯನ್ನ ಸಹಿಸಲು ಆಗದೆ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲ ಶಾಸಕರು ಸಭೆ ನಡೆಸಿ ಹಸಿರು ಸೇನೆಯ ವಿರುದ್ದ ಪ್ರತಿಭಟಿಸುತ್ತೇವೆ ಎಂದು ಅವರು ಹೇಳಿದರು.
ಹಿಂದೆ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಗಳು ಮಾಡಿದಾಗ ನೀವೆಷ್ಟು ಅಭಿವೃದ್ದಿ ಮಾಡಿದ್ದೀರಿ ಎಂದು ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್. ಆಶೋಕ್ ಅವರ ಆರೋಪಕ್ಕೆ ಬಿ.ಆರ್. ಪಾಟೀಲ್ ಅವರು ತಿರುಗೇಟು ನೀಡಿದರು.
ಸಭೆಯಲ್ಲಿ ತರಾ ತರಿಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗಿವೆ. ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಮುಂದಾಗಿದ್ದಾರೆ. ಆದಾಗ್ಯೂ, ಅಂತರ್ ಜಲ ಮಟ್ಟ ಹೆಚ್ಚಳ ಮಾಡುವುದರ ಬಗ್ಗೆ ಗಮನ ಕೊಡ್ತಿಲ್ಲ. ಅದಕ್ಕಾಗಿ ಚಿಂತನೆ ಇಲ್ಲ ಎಂದು ಅವರು ಸಮಧಾನ ಹೊರಹಾಕಿದರು.
ಈ ಭಾಗದಲ್ಲಿ ತೊಗರಿ ಬೆಳೆ ಪ್ರಮುಖವಾಗಿದೆ. ಕಳೆದ ಹಲವಾರು ವರ್ಷಗಳಿಂದ ತೊಗರಿ ಬೆಳೆಗೆ ಸೂಕ್ತ ಬೆಂಬಲ ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಡಲಾಗಿದೆ. ತೊಗರಿ ಮಂಡಳಿಯು ನಿಶ್ಯಕ್ತವಾಗಿದೆ. ಆ ಮಂಡಳಿಗೆ ಶಕ್ತಿ ತುಂಬುವಂತಹ ಕೆಲಸವನ್ನು ಸಚಿವ ಸಂಪುಟ ಸಭೆಯಲ್ಲಿ ಮಾಡಲಿಲ್ಲ ಎಂದು ಅವರು ಅತೃಪ್ತಿ ಹೊರಹಾಕಿದರು.
ಈ ಭಾಗಕ್ಕೆ ಟ್ರಿಬ್ಯುನಲ್ ಸಹ ರಚನೆಯಾಗಬೇಕಾಗಿತ್ತು. ಹಂತ, ಹಂತವಾಗಿ ಬೇಡಿಕೆಗಳನ್ನು ಈಡೇರಿಸಲು ಸಮಯವಿದೆ ಎಂದು ಅವರು ಹೇಳಿದರು.
ರಾಜಕೀಯ ನಿವೃತ್ತಿ ಸುಳಿವು: ಅದಷ್ಟು ಬೇಗನೇ ರಾಜಕೀಯ ನಿವೃತ್ತಿ ಹೊಂದಿ ಹೋಗುವುದು ಇದೆ ಎಂದು ಪ್ರಭಾವಿ ಮುಖಂಡ ಬಿ.ಆರ್. ಪಾಟೀಲ್ ಅವರು ರಾಜಕೀಯ ಸುಳಿವನ್ನೂ ಸಹ ಇದೇ ಸಂದರ್ಭದಲ್ಲಿ ನೀಡಿದರು.
ಯಾವಾಗ ನಿವೃತ್ತಿ ಹೊಂದುವೆ ಎಂಬುದನ್ನು ಖಚಿತವಾಗಿ ಹೇಳದ ಅವರು, ರಾಜಕೀಯ ನಿವೃತ್ತಿ ಹೊಂದಿ ದೇಶ ಸುತ್ತೋದು, ಸಂಗೀತ ಕೇಳೋದು ಬಹಳ ಕೆಲಸ ಇದೆ ಎಂದು ಹೇಳುವ ಮೂಲಕ ರಾಜಕೀಯ ನಿವೃತ್ತಿಯ ಕುರಿತು ಸ್ಪಷ್ಟ ಸುಳಿವನ್ನೂ ಸಹ ನೀಡಿದರು.
ಸಂಚಲನ: ಮುಖ್ಯಮಂತ್ರಿಗಳ ಸಲಹೆಗಾರರಾಗಿ ಸಚಿವ ಸಂಪುಟ ಸಭೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಕೇವಲ ವಿರೋಧ ಪಕ್ಷಗಳಿಗೆ ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದೊಳಗೂ ಸಹ ತೀವ್ರ ಸಂಚಲನವನ್ನು ಉಂಟು ಮಾಡಿದೆ.
ಈ ಹಿಂದೆ ಸಹ ಬೀದರ್ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರ ಏಕಪಕ್ಷೀಯ ನಿರ್ಣಯಗಳಿಗೆ ಬಿ.ಆರ್. ಪಾಟೀಲ್ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಪುತ್ರ ಸಾಗರ್ ಖಂಡ್ರೆಯವರಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಈಶ್ವರ್ ಖಂಡ್ರೆಯವರು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನೆಪ ಮಾಡಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಯಾರಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಬೀದರ್ ಜಿಲ್ಲೆಯ ಮುಖ್ಯಮಂತ್ರಿಗಳು, ಖರ್ಗೆಯವರು ಪಾಲ್ಗೊಂಡ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಶಿಷ್ಠಾಚಾರದಂತೆ ಅವರಿಗೆ ಆಸನವನ್ನೂ ಸಹ ಕೊಟ್ಟಿರಲಿಲ್ಲ. ಕೊನೆಗೆ ಬಿ.ಆರ್. ಪಾಟೀಲ್ ಅವರ ಹೆಸರನ್ನೂ ಸಹ ಈಶ್ವರ್ ಖಂಡ್ರೆ ಅವರು ಉಲ್ಲೇಖಿಸಲಿಲ್ಲ. ಹೀಗಾಗಿ ಸಮಾರಂಭದ ವೇದಿಕೆಯಿಂದ ಬಿ.ಆರ್. ಪಾಟೀಲ್ ಅವರು ನಿರ್ಗಮಿಸಿದ್ದರು. ಈಶ್ವರ್ ಖಂಡ್ರೆ ಅವರು ತಮ್ಮ ಅಚಾತುರ್ಯದಿಂದ ಪ್ರಮಾದವಾಗಿರುವ ಕುರಿತು ಈಶ್ವರ್ ಖಂಡ್ರೆ ಅವರು ಸ್ವತ: ಬಿ.ಆರ್. ಪಾಟೀಲ್ ಅವರಲ್ಲಿ ವಿಷಾಧ ವ್ಯಕ್ತಪಡಿಸಿದ್ದರು.
ನಂತರ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಟಿಕೆಟ್ ಸಿಗದೇ ಇದ್ದರೂ ಸಹ ಸಾಗರ್ ಖಂಡ್ರೆಯವರಿಗೆ ಕಾಂಗ್ರೆಸ್ ಟಿಕೆಟ್‍ನ್ನು ಪಕ್ಷದ ವರಿಷ್ಠರು ಕೊಟ್ಟರೆ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಬಿ.ಆರ್. ಪಾಟೀಲ್ ಅವರು ಘೋಷಿಸುವ ಮೂಲಕ ಹೇಳಿದಂತೆ ನಡೆದುಕೊಂಡು, ಬೀದರ್ ಲೋಕಸಭಾ ಕ್ಷೇತ್ರದಲ್ಲಿ ದೇಶದ ಅತ್ಯಂತ ಕಿರಿಯ ವಯಸ್ಸಿನ ಸಾಗರ್ ಖಂಡ್ರೆಯವರಿಗೆ ಅದೂ ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ಅವರ ವಿರುದ್ಧ ಗೆಲ್ಲಿಸುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು.
ಇದಕ್ಕೂ ಮುನ್ನ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರಗಳಿಗೆ ತೆರಳುತ್ತಿಲ್ಲ ಎಂಬ ಪತ್ರವನ್ನು ಕೆಲವು ಸಮಾನ ಮನಸ್ಕ ಶಾಸಕರೊಂದಿಗೆ ಮುಖ್ಯಮಂತ್ರಿಗಳಿಗೆ ಬಿ.ಆರ್. ಪಾಟೀಲ್ ಅವರು ಬರೆದಿದ್ದೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿತ್ತು. ಈಗ ಸಚಿವ ಸಂಪುಟ ಸಭೆಯ ಕುರಿತು ಅಸಮಾಧಾನ ಹೊರಹಾಕಿದ್ದು, ಈ ಕುರಿತು ಆಡಳಿತ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರಿಗೆ ಮುಜುಗರ ಹುಟ್ಟಿಸುವುದಂತೂ ಸತ್ಯ.