ವೈದ್ಯರ ಮೇಲೆ ರೋಗಿ ಕುಟುಂಬಸ್ಥರ ಹಲ್ಲೆ
ವಡೋದರ,ಸೆ.೧೯-ಗುಜರಾತ್‌ನ ಆಸ್ಪತ್ರೆಯೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಸ್ಪತ್ರೆ ವೈದ್ಯರೊಬ್ಬರಿಗೆ ರೋಗಿಯ ಕುಟುಂಬದ ಸದಸ್ಯರು ಥಳಿಸಿದ ಪ್ರಕರಣ ನಡೆದಿದೆ. ಈ ಘಟನೆ ಅಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತುರ್ತು ಚಿಕಿತ್ಸಾ ವಿಭಾಗಕ್ಕೆ ಬರುವ ಮುನ್ನ ರೋಗಿಯ ಕುಟುಂಬದ ಸದಸ್ಯರಿಗೆ ಪಾದರಕ್ಷೆ ತೆಗೆದು ತುರ್ತು ಚಿಕಿತ್ಸಾ ವಿಭಾಗಕ್ಕೆ ಬರಲು ಹೇಳಿದ ವೈದ್ಯರಿಗೆ ಮನಬಂದಂತೆ ಥಳಿಸಿದ್ದಾರೆ.
ಗುಜರಾತ್‌ನ ಭಾವನಗರದ ಸೆಹೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಚಿಕಿತ್ಸೆಗಾಗಿ ಶನಿವಾರ ಆರೋಪಿಗಳು ಆಸ್ಪತ್ರೆಗೆ ಬಂದಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮಹಿಳೆಯ ತಲೆಗೆ ಗಾಯವಾದ ಕಾರಣ ಚಿಕಿತ್ಸೆಗಾಗಿ ಆಕೆಯನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗ ಕರ್ತವ್ಯ ನಿರತ ವೈದ್ಯ ಜೈದೀಪ್ ಸಿಂಗ್ ಗೋಹಿಲ್ ಅವರು ತುರ್ತು ಚಿಕಿತ್ಸಾ ವಿಭಾಗದಲ್ಲಿರುವ ರೋಗಿಯ ಕುಟುಂಬ ಸದಸ್ಯರನ್ನು ಅವರ ಚಪ್ಪಲಿಗಳನ್ನು ತೆಗೆಯುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಕುಟುಂಬಸ್ಥರು ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಹೊಡೆದಾಟದ ವೇಳೆ ಅಲ್ಲಿದ್ದ ರೋಗಿ ಹಾಗೂ ನರ್ಸ್ ಮಧ್ಯಪ್ರವೇಶಿಸಲು ಯತ್ನಿಸಿದ್ದು, ಜಗಳ ಹಂತಹಂತವಾಗಿ ಉಲ್ಬಣಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಹೊಡೆದಾಟದಲ್ಲಿ ಕೋಣೆಯಲ್ಲಿ ಇರಿಸಲಾಗಿದ್ದ ಔಷಧಗಳು ಹಾಗೂ ಇತರೆ ಉಪಕರಣಗಳಿಗೂ ಹಾನಿಯಾಗಿದೆ.
ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹಿರೇನ್ ದಂಗರ್, ಭಾವದೀಪ್ ದಂಗರ್ ಮತ್ತು ಕೌಶಿಕ್ ಕುವಾಡಿಯಾ ವಿರುದ್ಧ ಸೆಕ್ಷನ್ ೧೧೫ (೨) (ಯಾವುದೇ ವ್ಯಕ್ತಿಗೆ ನೋವುಂಟು ಮಾಡುವ ಉದ್ದೇಶದಿಂದ ಕೃತ್ಯ), ೩೫೨ (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ೩೫೧ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.