ಬಾಂಗ್ಲಾ ದಾಳಿಗೆ ಭಾರತ ತತ್ತರ
ಚೆನ್ನೈ.ಸೆ.೧೯- ಯುವ ವೇಗಿ ಹಸನ್ ಮಹಮೂದ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಕಳಪೆ ಆರಂಭ ಪಡೆದಿದೆ. ಇಲ್ಲಿನ ಚೆಪಾಕ್ ಮೈದಾನದಲ್ಲಿ ಆರಂಭವಾದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ದುಕೊಂಡಿತು.ಬಾಂಗ್ಲಾ ತಂಡದ ಕರಾರುವಕ್ ದಾಳಿಗೆ ಟೀಮ್ ಇಂಡಿಯಾದ ತಾರಾ ಬ್ಯಾಟರ್‌ಗಳು ವಿಫಲರಾದರು. ರನ್ ಗಳಿಸಲು ತಿಣುಕಾಡಿದರು. ಒತ್ತಡಕ್ಕೆ ಸಿಲುಕಿದವಂತೆ ಕಂಡುಬಂದು ಪೆವಿಲಿಯನ್ ಸೇರಿದರು.
ಯುವ ವೇಗಿ ಹಸನ್ ಮಹಮೂದ್ ಭಾರತೀಯ ಬ್ಯಾಟರ್‌ಗಳನ್ನ ಕಾಡಿದರು. ಕೇವಲ ೬ ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ಅವರನ್ನ ಹಸನ್ ಮಹಮೂದ್ ಮೊದಲ ಬಲಿತೆಗೆದುಕೊಂಡರು. ಒಂದನೇ ಕ್ರಮಾಂಕದಲ್ಲಿ ಬಂದ ಶುಭಮನ್ ಗಿಲ್ (೦ ರನ್) ಹಸನ್ ಎಸೆತದಲ್ಲಿ ಲಿಟನ್ ದಾಸ್‌ಗೆ ಕ್ಯಾಚ್ ನೀಡಿ ಹೊರ ನಡೆದರು.
ನಂತರ ಬಂದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ೬ ರನ್‌ಗಳಿಸಿ ಹಸನ್‌ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಮೊದಲ ಅವಧಿಯಲ್ಲೆ ಭಾರತ ೩ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಓಪನರ್ ಯಶಸ್ವಿ ಜೈಸ್ವಾಲ್ ಜತೆಗೂಡಿದ ರಿಷಭ್ ಪಂತ್ ೬೨ ರನ್‌ಗಳ ಜತೆಯಾಟ ನೀಡಿ ತಂಡದ ಕುಸಿತ ತಡೆದರು. ಈ ಜೋಡಿ ವಿಕೆಟ್ ಬೀಳದಂತೆ ಎಚ್ಚರಿಕೆ ಆಟವಾಡಿ ಬೋಜನ ವಿರಾಮದ ವೇಳೆಗೆ ೩ ವಿಕೆಟ್ ನಷ್ಟಕ್ಕೆ ೮೮ ರನ್ ಕಲೆ ಹಾಕಿತು.
ನಂತರ ೬ ಬೌಂಡರಿ ಹೊಡೆದು ೩೯ ರನ್ ಗಳಿಸಿದ್ದ ರಿಷಭ್ ಪಂತ್ ಹಸನ್ ಮಹಮೂದ್‌ಗೆ ವಿಕೆಟ್ ಒಪ್ಪಿಸಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ವೇಗಿ ನಹೀದ್ ರಾಣಾಗೆ ವಿಕೆಟ್ ಒಪ್ಪಿಸಿದರು. ಕನ್ನಡಿಗ ಕೆ.ಎಲ್.ರಾಹುಲ್ (೧೬ರನ್)ಮೆಹದಿ ಹಸನ್‌ಗೆ ಬಲಿಯಾದರು. ಟೀ ವಿರಾಮಕ್ಕೂ ಮುನ್ನ ಭಾರತ ೬ ವಿಕೆಟ್ ನಷ್ಟಕ್ಕೆ ೧೭೬ ರನ್ ಪೇರಿಸಿತ್ತು.