ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ಸಾವಿನ ಸಂಖ್ಯೆ ೩೨,೭೦೫ ಕ್ಕೆ ಏರಿಕೆ
ಗಾಜಾ,ಮಾ.೩೧-ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟ ಪ್ಯಾಲೆಸ್ತೀನ್‌ನವರ ಸಂಖ್ಯೆ ೩೨,೭೦೫ಕ್ಕೆ ಏರಿಕೆಯಾಗಿದೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ, ಇಸ್ರೇಲಿ ಪಡೆಗಳು ೮೨ ಜನರನ್ನು ಕೊಂದಿವೆ ಮತ್ತು ೯೮ ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ . ಸಚಿವಾಲಯದ ಪ್ರಕಾರ, ಕಳೆದ ವರ್ಷ ಅಕ್ಟೋಬರ್ ೭ ರಂದು ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದಾಗಿನಿಂದ ಕೊಲ್ಲಲ್ಪಟ್ಟ ಒಟ್ಟು ಪ್ಯಾಲೆಸ್ಟೀನಿಯಾದವರ ಸಂಖ್ಯೆ ೩೨,೭೦೫ ತಲುಪಿದೆ ಮತ್ತು ಗಾಯಗೊಂಡವರು ೭೫,೧೯೦.ಸಂಖ್ಯೆಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಅಕ್ಟೋಬರ್ ೭, ೨೦೨೩ ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಆಕ್ರಮಣದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ದೊಡ್ಡ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿತು, ಈ ಸಮಯದಲ್ಲಿ ಸುಮಾರು ೧,೨೦೦ ಜನರು ಸಾವನ್ನಪ್ಪಿದರು ಮತ್ತು ೨೫೦ ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಮಾಡಿಕೊಳ್ಳಲಾಗಿದೆ.