ಲೋಕಸಮರ: ‘ಕೈ’ಗೆ 15 ಸ್ಥಾನ ಗ್ಯಾರಂಟಿ
ಬೆಂಗಳೂರು, ಮಾ. ೩೧- ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ ೧೫ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿಯಲಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿಂದು ಅನೌಪಚಾರಿಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕನಿಷ್ಠ ೧೫ ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ. ಗ್ಯಾರಂಟಿ ಯೋಜನೆಗಳು ಅಂಡರ್ ಕರೆಂಟ್‌ನಂತೆ ಕೆಲಸ ಮಾಡಲಿವೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೨೮ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬುದು ಸರಿಯಲ್ಲ. ಅದು ಸಾಧ್ಯವಾಗದ ಮಾತು. ಕಾಂಗ್ರೆಸ್ ಪಕ್ಷ ೧೫ ರಿಂದ ೨೦ ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ತಮ್ಮದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. ಈ ಯೋಜನೆಗಳು ಚುನಾವಣೆಯಲ್ಲಿ ನಮ್ಮ ಗೆಲುವಿಗೆ ನೆರವಾಗಲಿವೆ. ಅದರಲ್ಲೂ ಮಹಿಳಾ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಅವರು ಹೇಳಿದರು.
ನಾನು ಜನರ ನಾಡಿನ ಮಿಡಿತ ಅರಿತಿದ್ದೇನೆ. ಜನರ ಜತೆ ದಿನನಿತ್ಯವೂ ಬೆರೆಯುತ್ತೇನೆ. ಇವೆಲ್ಲವುಗಳ ಆಧಾರ ಹಾಗೂ ಚುನಾವಣಾ ಸಂಬಂಧ ನಡೆದಿರುವ ಸಮೀಕ್ಷೆಗಳನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಕನಿಷ್ಠ ೧೫ ಸ್ಥಾನ ಗೆಲ್ಲಲಿದೆ ಎಂಬುದು ತಮ್ಮ ಖಚಿತ ಭರವಸೆ ಎಂದರು.
ಸಚಿವರಿಗೆ ಜವಾಬ್ದಾರಿ
ಲೋಕಸಭಾ ಚುನಾವಣೆಯಲ್ಲಿ ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರಿಗೂ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನೀಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಸಮನ್ವಯತೆ ಕಾಯ್ದುಕೊಂಡು ಒಗ್ಗೂಡಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಕೋಲಾರ ಬಿಟ್ಟರೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಗೊಂದಲಗಳು ಇಲ್ಲ. ಹೆಚ್ಚು ಗೊಂದಲಗಳು, ಭಿನ್ನಮತ ಇರುವುದು ಬಿಜೆಪಿಯಲ್ಲೇ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಮೋದಿ ಅಲೆ ಇಲ್ಲ. ಇದೆಲ್ಲಾ ಬಿಜೆಪಿಯವರ ಸೃಷ್ಟಿ. ಈ ಚುನಾವಣೆಯಲ್ಲಿ ಬಿಜೆಪಿ ೪೦೦ ಸ್ಥಾನ ಗೆಲ್ಲುತ್ತದೆ ಎಂಬುದು ಸುಳ್ಳು. ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆ ಸೃಷ್ಟಿಸುವ ಪ್ರಯತ್ನ ಬಿಜೆಪಿಯಿಂದ ನಡೆದಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದರು.
ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಸಾಧನೆಗಳು, ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುತ್ತದೆ. ನಮ್ಮ ಸಾಧನೆಗಳಿಗೆ ಜನ ಈ ಚುನಾವಣೆಯಲ್ಲಿ ಮನ್ನಣೆ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಕಳೆದ ಹತ್ತು ವರ್ಷಗಳಿದಂ ಅಧಿಕಾರದಲ್ಲಿದೆ. ಹತ್ತು ವರ್ಷಗಳಲ್ಲಿ ಬಿಜೆಪಿ ಸಾಧನೆ ಏನು. ರಾಮಮಂದಿರ ಕಟ್ಟಿರಬಹುದು. ಅದು ಆಧ್ಯಾತ್ಮಿಕವಾಗಿ ಒಳ್ಳೆಯ ಕೆಲಸ. ಆದರೆ ಜನರ ಬದುಕಿಗೆ ನೆರವಾಗುವ ಅವರ ಹೊಟ್ಟೆ ತುಂಬಿಸುವ ಯಾವುದಾದರೂ ಯೋಜನೆಗಳನ್ನು ಪ್ರಧಾನಿ ಮೋದಿ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಬೆಲೆ ಏರಿಕೆ, ನಿರುದ್ಯೋಗ ಇವೆಲ್ಲಾ ಬಿಜೆಪಿಗೆ ಚುನಾವಣೆಯಲ್ಲಿ ಹೊಡೆತ ಕೊಡಲಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಜನ ಸುಶಿಕ್ಷತರಾಗಿದ್ದಾರೆ. ಈಗ ಶೇ. ೮೦ ರಷ್ಟು ಮತದಾರರು ಸುಶಿಕ್ಷಿತರರು ಹಾಗಾಗಿ ಅವರಿಗೆ ಎಲ್ಲವೂ ಗೊತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ತೆರಿಗೆ ಅನ್ಯಾಯ, ಅನುದಾನ ಕಡಿತ ಎಲ್ಲವೂ ಜನರಿಗೆ ಮನವರಿಕೆಯಾಗಿವೆ. ಇವೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ನೆರವಾಗಲಿವೆ. ಕೇಂದ್ರದ ಬಿಜೆಪಿ ಸರ್ಕಾರದ ಅನ್ಯಾಯದ ವಿರುದ್ಧ ರಾಜ್ಯದ ಜನ ಆಕ್ರೋಶಗೊಂಡಿದ್ದಾರೆ. ಈ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸುವುದು ನಿಶ್ಚಿತ ಎಂದು ಅವರು ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಅವರು ರಾಜ್ಯದಲ್ಲಿ ಭೀಕರ ಬರ ಇದೆ. ಕೇಂದ್ರ ಸರ್ಕಾರ ಇದುವರೆಗೂ ಒಂದು ಪೈಸೆ ಹಣ ಕೊಟ್ಟಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಕೇಂದ್ರ ನೆರವು ನೀಡುತ್ತಿಲ್ಲ ಎಂಬುದು ಜನರಿಗೆ ಗೊತ್ತಿದೆ. ಕೇಂದ್ರದ ಮಲತಾಯಿ ಧೋರಣೆ ಎಲ್ಲವೂ ಜನರಿಗೆ ಅರ್ಥವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಚುನಾವಣೆಯಲ್ಲಿ ಹಣವೇ ಪ್ರಧಾನ ಎಂಬುದು ಸರಿಯಲ್ಲ. ಜನ ಬೆಂಬಲವೇ ಚುನಾವಣೆಯಲ್ಲಿ ಮುಖ್ಯ. ನಾವು ಅಭ್ಯರ್ಥಿಗಳ ಆಯ್ಕೆಯನ್ನು ಸಮೀಕ್ಷೆ, ಸ್ಥಳೀಯ ನಾಯಕರ ಅಭಿಪ್ರಾಯದ ಆಧಾರದ ಮೇಲೆ ಮಾಡಿದ್ದೇವೆ. ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತ್ರ ಹೈಕಮಾಂಡ್ ಅಭ್ಯರ್ಥಿ ಆಯ್ಕೆ ಮಾಡಿದೆ ಎಂದು ಅವರು ಹೇಳಿದರು.
ತಮ್ಮ ತವರು ಜಿಲ್ಲೆ ಮೈಸೂರು, ಚಾಮರಾಜನಗರ ಸೇರಿದಂತೆ ೧೫ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿಯವರು ೨೮ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಅದು ಸಾಧ್ಯವಾಗುವ ಮಾತೆ ಎಂದು ಪ್ರಶ್ನಿಸಿದರು
ಬಿಜೆಪಿ-ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ತಕ್ಷಣ ಜೆಡಿಎಸ್ ಮತಗಳು ಬಿಜೆಪಿಗೆ ಹೋಗುತ್ತವೆ ಎಂದು ನಮಗೆ ಅನಿಸಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ಮೈಸೂರು, ಮಂಡ್ಯ ಮತ್ತಿತರ ಕಡೆ ಜೆಡಿಎಸ್ ಮತಗಳು ನಮಗೆ ಬರಲಿಲ್ಲ. ನಮ್ಮ ಮತಗಳು ಜೆಡಿಎಸ್‌ಗೆ ಹೋಗಲಿಲ್ಲ. ಅದೇ ರೀತಿ ಬಿಜೆಪಿ-ಜೆಡಿಎಸ್ ಮೈತ್ರಿಗೂ ಇದೇ ಮಾನದಂಡ ಅನ್ವಯಿಸುತ್ತದೆ ಎಂದು ಸಿದ್ಧರಾಮಯ್ಯ ಹೇಳಿದರು.
ನಾಳೆಯಿಂದ ಪ್ರಚಾರ
ಈ ಲೋಕಸಭಾ ಚುನಾವಣೆಗೆ ನಾವು ನಾಳೆಯಿಂದ ಪ್ರಚಾರ ಆರಂಭಿಸುತ್ತಿದ್ದೇನೆ. ನಾಳೆ, ನಾಡಿದ್ದು ಮೈಸೂರಿನಲ್ಲೇ ಇದ್ದು ಕಾರ್ಯಕರ್ತರ ಸಭೆ ನಡೆಸಿ ನಮ್ಮ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಮೈಸೂರು-ಚಾಮರಾಜನಗರ ಎರಡೂ ಕ್ಷೇತ್ರವನ್ನು ನಾವು ಗೆಲ್ಲುವುದು ನಿಶ್ಚಿತ ಎಂದರು.
ಮಂಡ್ಯದಲ್ಲೂ ಪೈಪೋಟಿ ಇದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ. ಬಿಜೆಪಿ ಅಭ್ಯರ್ಥಿ ಒಳ್ಳೆಯ ಡಾಕ್ಟರ್ ಇರಬಹುದು. ಆದರೆ ಅವರು ರಾಜಕಾರಣಿ ಅಲ್ಲ. ಹಾಗಾಗಿ ಇಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ರಾಜ್ಯದ ಎಲ್ಲ ಕಡೆ ಚುನಾವಣಾ ಪ್ರಚಾರ ನಡೆಸುತ್ತೇನೆ. ಹೊರ ರಾಜ್ಯಗಳಿಗೆ ಚುನಾವಣಾ ಪ್ರಚಾರಕ್ಕೆ ಹೋಗುವ ಬಗ್ಗೆ ತೀರ್ಮಾನಿಸಿಲ್ಲ. ರಾಜ್ಯದಲ್ಲೇ ಹೆಚ್ಚು ಪ್ರಚಾರ ಮಾಡುತ್ತೇನೆ. ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ನಮ್ಮ ಗ್ಯಾರಂಟಿ ಯೋಜನೆಗಳಿಗೆ ಜನ ಮನ್ನಣೆ ನೀಡಿದ್ದಾರೆ ಎಂಬುದನ್ನು ಸಾಬೀತು ಮಾಡುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಸಚಿವ ಡಾ. ಎಸ್.ಸಿ. ಮಹದೇವಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಸಚಿವರು ಸ್ಪರ್ಧೆ ಮಾಡುವ ತೀರ್ಮಾನ ಮಾಡಿರಲಿಲ್ಲ. ಚಾಮರಾಜನಗರದಲ್ಲಿ ಸಚಿವ ಮಹದೇವಪ್ಪ ಅವರ ಮಗನಿಗೆ ಟಿಕೆಟ್ ಕೊಟ್ಟಿದ್ದೇವೆ. ನನ್ನ ಮಗ ಯತೀಂದ್ರ ಸಹ ಚುನಾವಣೆಗೆ ಸ್ಪರ್ಧೆ ಮಾಡುವ ಯಾವುದೇ ಪ್ರಸ್ತಾಪಗಳು ಇರಲಿಲ್ಲ. ಮೇಲಾಗಿ ವರುಣಾ ಕ್ಷೇತ್ರ ಚಾಮರಾಜನಗರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಯತೀಂದ್ರ ಸಿದ್ಧರಾಮಯ್ಯ ಸ್ಪರ್ಧೆಯ ಪ್ರಸ್ತಾವವೇ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.