ಹೆಚ್.ಡಿ.ಕೆ ಸುಮಲತಾ ಭೇಟಿ ಕುತೂಹಲ
ಬೆಂಗಳೂರು, ಮಾ. ೩೧- ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಇಂದು ಭೇಟಿ ಮಾಡುವರು.
ಇಂದು ಸಂಜೆ ಬೆಂಗಳೂರಿನ ಸುಮಲತಾ ಅವರ ನಿವಾಸಕ್ಕೆ ಕುಮಾರಸ್ವಾಮಿ ಅವರು ಭೇಟಿ ನೀಡಿ ಅವರ ಜತೆ ಚರ್ಚೆ ನಡೆಸುವರು.
ಮಂಡ್ಯದ ಹಾಲಿ ಸಂಸದೆಯಾಗಿದ್ದ ಸುಮಲತಾ ಅಂಬರೀಷ್ ಅವರನ್ನು ಈ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕುಮಾರಸ್ವಾಮಿ ಅವರು ಈ ಭೇಟಿ ಸಂದರ್ಭದಲ್ಲಿ ಮನವಿ ಮಾಡುವರು ಎಂದು ಹೇಳಲಾಗಿದೆ.
ಈ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರು ಬಿಜೆಪಿಯಿಂದ ಮಂಡ್ಯ ಕ್ಷೇತ್ರದ ಟಿಕೆಟ್ ಬಯಸಿದ್ದರಾದರೂ ಬಿಜೆಪಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಕಾರಣ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಹಾಗಾಗಿ ಸುಮಲತಾ ಅವರು ನಿನ್ನೆಯಷ್ಟೇ ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ್ದರು.
ಈ ಸಭೆಯಲ್ಲಿ ಸುಮಲತಾ ಮಂಡ್ಯದಿಂದ ಪಕ್ಷೇತರರಾಗಿ ಕಣಕ್ಕಿಳಿಯಬೇಕು ಎಂದು ಅವರ ಬೆಂಬಲಿಗರು ಆಗ್ರಹಿಸಿದ್ದರು. ಬೆಂಬಲಿಗರ ಅಭಿಪ್ರಾಯ ಆಲಿಸಿದ ಅವರು ಏಪ್ರಿಲ್ ೩ ರಂದು ಮಂಡ್ಯದಲ್ಲಿ ಸಭೆ ಮಾಡಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೆ ಕುಮಾರಸ್ವಾಮಿ ಅವರು ಸುಮಲತಾ ಅವರನ್ನು ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಲು ಮುಂದಾಗಿರುವುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.