ರಣ ಬಿಸಿಲಿಗೆ ರಾಜ್ಯದಲ್ಲಿ ಮೊದಲ ಬಲಿ
ಕಲಬುರಗಿ,ಮಾ.೩೧-ರಾಜ್ಯದಲ್ಲಿ ಕಳೆದ ಕೆಲ ವಾರಗಳಿಂದ ರಣ ಬಿಸಿಲಿನ ಬೇಗೆ ಹೆಚ್ಚುತ್ತಿದ್ದು ಬಿಸಿಲಿನ ತಾಪಕ್ಕೆ ಬೆದರಿ ಜನರು ಮನೆಯಿಂದ ಹೊರ ಬರಲು ಹೆದರುತ್ತಿರುವ ಬೆನ್ನಲ್ಲೇ ನರೇಗಾ ಕೂಲಿ ಕೆಲಸ ಮಾಡುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದು, ಬಿಸಿಲಿನ ತಾಪದಿಂದ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದ ಶರಣಪ್ಪ ಸಮಗಾರ (೪೨) ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಿಸಿಲಿನ ಹೊಡೆತಕ್ಕೆ ಶರಣಪ್ಪನ ಸಾವನ್ನಪ್ಪಿದ್ದಾರೆಯೇ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಶರಣಪ್ಪ ಸಮಗಾರ ಮರಣೋತ್ತರ ಪರೀಕ್ಷೆ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಘಟನೆ ಸಂಬಂಧ ಕಲಬುರಗಿ ಜಿಲ್ಲೆಯ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಾರಿ ರಾಜ್ಯದ ಎರಡು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ೪೦ಲಿ ದಾಟಿದ್ದು, ಬಾಗಲಕೋಟೆ ೪೦.೬ಲಿ ಹಾಗೂ ಕಲಬುರಗಿಯಲ್ಲಿ ೪೦.೯ಲಿ ತಾಪಮಾನ ದಾಖಲಾಗಿದೆ. ಬೆಂಗಳೂರಲ್ಲಿ ೧೯೯೬ರ ಬಳಿಕ ಅತಿ ಹೆಚ್ಚು ತಾಪಮಾನ ಮಾರ್ಚ್‌ನಲ್ಲಿ ದಾಖಲಾಗಿದೆ. ೧೯೯೬ರಲ್ಲಿ ಬೆಂಗಳೂರಲ್ಲಿ ೩೭.೩ಲಿ ನಷ್ಟು ತಾಪಮಾನ ದಾಖಲಾಗಿತ್ತು.
ಈ ಬಾರಿ ಬೆಂಗಳೂರಲ್ಲಿ ಮಾರ್ಚ್‌ನಲ್ಲಿ ೩೬ಲಿ ಸರಾಸರಿಯಲ್ಲಿ ತಾಪಮಾನ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಉಳಿದಂತೆ ಈ ಬೇಸಿಗೆಯಲ್ಲಿ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. ಕೊಪ್ಪಳ, ರಾಯಚೂರು, ಗದಗ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ಅಧಿಕ ತಾಪಮಾನ ಇದೆ. ೧೯೯೬ರಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ೪೪.೬ಲಿಕ್ಕೆ ಏರಿದ್ದ ಬೇಸಿಗೆಯ ಧಗೆ, ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ೪೦ಲಿ ದಾಟಿದೆ.
ತಾಪಕ್ಕೆ ಜನರು ಹೈರಾಣ:
ಇನ್ನು ಕಡಲ ನಗರಿ ಮಂಗಳೂರಿನಲ್ಲೂ ಬಿಸಿಲಿನ ತಾಪ ಏರಿದ್ದು, ೩೫ಲಿ ಸರಾಸರಿಯಲ್ಲಿ ಕರಾವಳಿ ಭಾಗದಲ್ಲಿ ಈ ಬಾರಿಯ ಮಾರ್ಚ್‌ನಲ್ಲಿ ತಾಪಮಾನ ದಾಖಲಾಗಿದೆ.
ಬಿಸಿಲಿನ ತಾಪ ಏರಿದ್ದರಿಂದ ಮನೆಯೊಳಗೆ ಹಗಲು ಹೊತ್ತು ಕೂರದಂತಹ ಸ್ಥಿತಿ ತುಳುನಾಡಿನಲ್ಲಿ ನಿರ್ಮಾಣವಾಗಿದ್ದು, ಜನರು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಈತನ್ಮಧ್ಯೆ ಪುತ್ತೂರಿನ ಪರ್ಲಡ್ಕ ಸಮೀಪ ಮನೆಯೊಂದರಲ್ಲಿ ಹಂಚಿನ ಮನೆಯ ಮೇಲೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಕಿ ತಾಪಮಾನದಿಂದ ಪಾರಾಗಲು ಪ್ರಯತ್ನ ಪಟ್ಟಿದ್ದಾರೆ.
ಪುತ್ತೂರಿನಲ್ಲಿ ದಾಖಲೆ ಬಿಸಿಲು:
ಮನೆಯ ಮೇಲೆ ಸ್ಪ್ರಿಂಕ್ಲರ್ ಹಾಕಿ ನೀರು ಸಿಂಪಡಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಿಂದ ಜನರು ಯಾವ ಮಟ್ಟಿಗೆ ಬಿಸಿಲಿನ ಬೇಗೆಯಿಂದ ಬಳಲುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಪುತ್ತೂರಿನಲ್ಲಿ ೪೧ ಡಿಗ್ರಿ ಸೆಲ್ಸಿಯಸ್ ನವರೆಗೆ ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಏರಿಕೆಯಾಗಿದ್ದು, ಸುಡುವ ಬಿಸಿಲಿನಿಂದ ಪಾರಾಗಲು ಜನರು ಮಧ್ಯಾಹ್ನ ವೇಳೆಗೆ ಮನೆಯಿಂದ ಹೊರಗೆ ಬಾರದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಹವಾಮಾನ ಇಲಾಖೆ ಕೂಡ ಬಿಸಿಲಿನಿಂದ ಪಾರಾಗಲು ಜನರು ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ.