ಶರಣಬಸವೇಶ್ವರರ ಜಾತ್ರೆ ಉಚ್ಛಾಯಿಗೆ ಸಿಲುಕಿ ಗೃಹ ರಕ್ಷಕದಳದ ಸಿಬ್ಬಂದಿ ಸಾವು: ಇನ್ನೋರ್ವ ಗಾಯ
ಕಲಬುರಗಿ:ಮಾ.29: ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ಯ ಶುಕ್ರವಾರ ಸಂಜೆ ಜರುಗಿದ ಉಚ್ಛಾಯಿ ಎಳೆಯುವ ಕಾಲಕ್ಕೆ ಚಕ್ರಕ್ಕೆ ಸಿಲುಕಿ ಓರ್ವ ಗೃಹರಕ್ಷಕದಳದ ಸಿಬ್ಬಂದಿ ಮೃತಪಟ್ಟು, ಇನ್ನೋರ್ವ ಗೃಹರಕ್ಷಕದಳದ ಸಿಬ್ಬಂದಿ ಗಾಯಗೊಂಡ ಘಟನೆ ಸಂಭವಿಸಿದೆ.
ಮೃತನಿಗೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಇಟಗಾದ ನಿವಾಸಿ ರಾಮು ತಂದೆ ಸಿದ್ದಪ್ಪ ವಾಲಿ, ಗಾಯಾಳುವನ್ನು ಚಿಟಗುಪ್ಪಾ ಘಟಕದ ಗೃಹ ರಕ್ಷಕ ದಳದ ಸಿಬ್ಬಂದಿ ಅಶೋಕರೆಡ್ಡಿ ಎಂದು ಗುರುತಿಸಲಾಗಿದೆ.
ಸಂಜೆ ಸಾಂಪ್ರದಾಯಿಕ ರೀತಿಯಲ್ಲಿ ಉಚ್ಛಾಯಿ ಎಳೆಯುವಾಗ ಅಪಾರ ಸಂಖ್ಯೆಯ ಭಕ್ತರು ಇಕ್ಕೆಲಗಳಲ್ಲಿ ಸೇರಿದ್ದರು. ಉಚ್ಛಾಯಿ ಎಳೆಯುವಾಗ ಉಚ್ಛಾಯಿ ಸರಾಗವಾಗಿ ಹಾಗೂ ಸುಗಮವಾಗಿ ಎಳೆಯಲು ಗೃಹ ರಕ್ಷಕ ದಳದ ಸಿಬ್ಬಂದಿಯವರು ಭಕ್ತರನ್ನು ಬದಿಗೆ ಸರಿಸುತ್ತ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಉಚ್ಛಾಯಿ ಎಳೆಯುವ ಮಾರ್ಗದಲ್ಲಿ ಖಟಕ್ ಹಾಕಿದ್ದು, ಒಂದು ಖಟಕ್ ಕಲ್ಲಿಗೆ ಗೃಹರಕ್ಷಕದಳದ ಸಿಬ್ಬಂದಿ ರಾಮು ತಂದೆ ಸಿದ್ದಪ್ಪ ವಾಲಿ ಕಾಲು ಜಾರಿ ಕೆಳಗೆ ಬಿದ್ದ. ಆಗ ಆತನ ಮೇಲೆ ಉಚ್ಛಾಯಿಯ ಚಕ್ರಗಳು ಹರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಎನ್ನಲಾಗಿದೆ.
ಅದೇ ಉಚ್ಛಾಯಿ ಚಕ್ರಕ್ಕೆ ಇನ್ನೋರ್ವ ಗೃಹ ರಕ್ಷಕದಳದ ಸಿಬ್ಬಂದಿ ಚಿಟಗುಪ್ಪಾ ಘಟಕದ ಅಶೋಕರೆಡ್ಡಿ ಎಂಬಾತನ ಕಾಲು ಸಿಲುಕಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನಿಗೆ ಆಸ್ಪತ್ರೆಗೆ ಸೇರಿಸಲಾಗಿದೆ.
ಉಚ್ಛಾಯಿ ಸುಗಮವಾಗಿ ಜರುಗಲು ಬೀದರ್ ಜಿಲ್ಲೆಯ ಗೃಹರಕ್ಷಕದಳದ ಸುಮಾರು 100 ಸಿಬ್ಬಂದಿಗಳನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬಾತ ಮೃತಪಟ್ಟು, ಇನ್ನೋರ್ವ ಗಾಯಗೊಂಡಿದ್ದು, ಭಕ್ತ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಸಾವು ನೋವಿನಿಂದ ಸಡಗರ, ಸಂಭ್ರಮದಲ್ಲಿದ್ದ ಉಚ್ಛಾಯಿ ಎಳೆಯುವ ಕಾರ್ಯದಲ್ಲಿ ಶೋಕ ಮಡುಗಟ್ಟಿತ್ತು.
ಆರ್‌ಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.