ರಷ್ಯಾ -ಉಕ್ರೇನ್ ಸಂಘರ್ಷ ಪರಿಹಾರಕ್ಕೆ ಜೈಶಂಕರ್ ಪ್ರಯತ್ನ
ನವದೆಹಲಿ,ಮಾ.೩೦- ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ.
ಯುದ್ಧ ಪೀಡಿತ ದೇಶಗಳೊಂದಿಗೆ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಭಾರತದ ಬದ್ಧತೆ ಪುನರುಚ್ಚರಿಸಿದ ಸಚಿವ ಜೈ ಶಂಕರ್ ಅವರು ಎರಡು ವರ್ಷಗಳಿಂದ ಎಳೆದಾಡುತ್ತಿರುವ ಮತ್ತು ಅಂತ್ಯ ಕಾಣದ ಯುದ್ಧದ ಶಾಂತಿಯುತ ಇತ್ಯರ್ಥಕ್ಕೆ ಮಾತುಕತೆಯೊಂದೇ ಪರಿಹಾರ ಎಂದಿದ್ದಾರೆ.
ನಿರೀಕ್ಷೆಯಂತೆ, ಕುಲೇಬಾ ಈ ವರ್ಷದ ಬೇಸಿಗೆಯಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ಉದ್ದೇಶಿತ ಶಾಂತಿ ಶೃಂಗಸಭೆ ಆಯೋಜಿಸುವ ಪ್ರಯತ್ನಗಳಲ್ಲಿ ಭಾರತದ ಸಹಕಾರ ಕೋರಿ ೨೦೨೨ ರಲ್ಲಿ ಜಿ-೭ ನಾಯಕರ ಮುಂದೆ ಅವರು ಘೋಷಿಸಿದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ೧೦ ಅಂಶಗಳ ಶಾಂತಿ ಸೂತ್ರವನ್ನು ಬೆಂಬಲಿಸಿದ್ದಾರೆ.
ಯೋಜನೆ ಇತರ ವಿಷಯಗಳ ಜೊತೆಗೆ, ಉಕ್ರೇನಿಯನ್ ಪ್ರದೇಶದಿಂದ ರಷ್ಯಾದ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಪ್ರಯತ್ನಿಸುತ್ತದೆ. ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳನ್ನು ಇನ್ನೂ ಸ್ಪಷ್ಟವಾಗಿ ಖಂಡಿಸದ ಭಾರತ, ಝೆಲೆನ್ಸ್ಕಿಯ ಶಾಂತಿ ಯೋಜನೆಗೆ ಇನ್ನೂ ಬೆಂಬಲವನ್ನು ಘೋಷಿಸಿಲ್ಲ.
ಚರ್ಚೆಗಳು ನಡೆಯುತ್ತಿರುವ ಸಂಘರ್ಷ ಮತ್ತು ಅದರ ವ್ಯಾಪಕವಾದ ಪರಿಣಾಮಗಳ ಮೇಲೆ ಕೇಂದ್ರೀಕೃತವಾಗಿವೆ. ಆ ಸಂದರ್ಭದಲ್ಲಿ ವಿವಿಧ ಉಪಕ್ರಮಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ” ಎಂದು ಸಚಿವ ಜೈ ಶಂಕರ್ ತಿಳಿಸಿದ್ದಾರೆ
ಶಾಂತಿ ಸೂತ್ರ ಮತ್ತು ಅದರ ಅನುಷ್ಠಾನದ ಹಾದಿಯಲ್ಲಿ ಮುಂದಿನ ಕ್ರಮಗಳ ಬಗ್ಗೆ ನಿರ್ದಿಷ್ಟ ಗಮನ ನೀಡಲಾಯಿತು ಎಂದು ಅವರು ಹೇಳಿದ್ದಾರೆ