ನಾಮಪತ್ರ ಸಲ್ಲಿಕೆ ಆರಂಭ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮಾ.೨೮:ಏ. ೨೬ ರಂದು ಚುನಾವಣೆ ನಡೆಯುವ ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ ೧೪ ಕ್ಷೇತ್ರಗಳಿಗೆ ಏ. ೨೬ ರಂದು ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಇಂದಿನಿಂದ ಆರಂಭವಾಗಿದೆ.
ಲೋಕಸಭಾ ಚುನಾವಣೆಗೆ ಅಧಿಕೃತವಾಗಿ ಅಧಿಸೂಚನೆ ಹೊರ ಬೀಳುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಜಿದ್ದಾಜಿದ್ದಿಯ ಚುನಾವಣಾ ಸಮರಕ್ಕೆ ನಾಂದಿ ಹಾಡಲಾಗಿದೆ.
ರಾಜ್ಯದ ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏ. ೨೬ ರಂದು ನಡೆಯಲಿದೆ.
ಈ ಚುನಾವಣೆಗೆ ಇಂದು ಅಧಿಸೂಚನೆ ಹೊರಬಿದ್ದ ಬೆನ್ನಲ್ಲೆ ನಾಮಪತ್ರ ಸಲ್ಲಿಕೆಯೂ ಆರಂಭವಾಗಿದ್ದು, ಏ. ೪ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನಾಮಪತ್ರ ಪರಿಶೀಲನೆ ಏ. ೫ ರಂದು ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಏ. ೮ ಕೊನೆಯ ದಿನವಾಗಿದೆ.
ಏ. ೨೬ ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಜೂ. ೪ ರಂದು ನಡೆಯಲಿದೆ.
ಈ ಕ್ಷೇತ್ರಗಳ ಚುನಾವಣೆಗೆ ಪ್ರತಿದಿನ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆವರೆಗೂ ನಾಮಪತ್ರ ಸಲ್ಲಿಸಬಹುದಾಗಿದೆ. ರಜೆ ಇರುವ ದಿನ ನಾಮಪತ್ರ ಸಲ್ಲಿಕೆಗೆ ಅವಕಾಶ ಇರುವುದಿಲ್ಲ. ಏ. ೪ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ.
ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ ಏ. ೨೬ ರಂದು ಚುನಾವಣೆ ನಡೆದರೆ, ೨ನೇ ಹಂತದ ಚುನಾವಣೆ ಬಾಕಿ ಉಳಿಯುವ ೧೪ ಕ್ಷೇತ್ರಗಳಲ್ಲಿ ಮೇ ೭ ರಂದು ನಡೆಯಲಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಎಲ್ಲ ೨೫ ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಪ್ರಕಟಿಸಿದೆ. ಕಾಂಗ್ರೆಸ್ ಪಕ್ಷ ಚಿಕ್ಕಬಳ್ಳಾಪುರ, ಕೋಲಾರ,ಚಾಮರಾಜನಗರ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.