ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಶೀಘ್ರ ಅಪರಾಧಿಗಳ ಗಡಿಪಾರು
ಚೆನ್ನೈ, ಮಾ.೨೭- ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದ ಮೂವರು ಅಪರಾಧಿಗಳಿಗೆ ಶ್ರೀಲಂಕಾದ ಡೆಪ್ಯುಟಿ ಹೈಕಮಿಷನ್ ತಾತ್ಕಾಲಿಕ ಪ್ರಯಾಣ ದಾಖಲೆಗಳನ್ನು ನೀಡಿದ್ದು, ಹಾಗಾಗಿ ಶೀಘ್ರದಲ್ಲೇ ಅವರನ್ನು ಅವರ ತಾಯ್ನಾಡಿಗೆ ಗಡಿಪಾರು ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ. ಸದ್ಯ ಮೂವರು ಅಪರಾಧಿಗಳನ್ನು ತಿರುಚ್ಚಿಯ ಹೆಚ್ಚಿನ ಭದ್ರತಾ ವಿದೇಶಿಯರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.
ಮುರುಗನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಆರ್.ಸುರೇಶ್ ಕುಮಾರ್ ಮತ್ತು ಕೆ.ಕುಮಾರೇಶ್ ಬಾಬು ಅವರಿದ್ದ ವಿಭಾಗೀಯ ಪೀಠದ ಮುಂದೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್.ಮುನಿಯಪ್ಪರಾಜ್ ಈ ವಿಷಯ ತಿಳಿಸಿದರು. ಪ್ರಯಾಣದ ದಾಖಲೆಗಳಿಗೆ ಅರ್ಜಿ ಸಲ್ಲಿಸಲು ತನಗೆ ಅಧಿಕೃತ ಫೋಟೋ ಗುರುತಿನ ಚೀಟಿ ನೀಡಲು ತಮಿಳುನಾಡು ಪುನರ್ವಸತಿ ನಿರ್ದೇಶಕರಿಗೆ ನಿರ್ದೇಶನ ನೀಡುವಂತೆ ಅವರು ಕೋರಿದ್ದರು. ಹತ್ಯೆ ಪ್ರಕರಣದ ಆರೋಪಿಗಳಾದ ಶ್ರೀಹರನ್ ಅಲಿಯಾಸ್ ಮುರುಗನ್, ರಾಬರ್ಟ್ ಪಯಾಸ್ ಮತ್ತು ಜಯಕುಮಾರ್ ಅವರನ್ನು ಒಂದು ವಾರದ ಒಳಗಾಗಿ ಶ್ರೀಲಂಕಾಗೆ ಗಡೀಪಾರು ಮಾಡಲಾಗುತ್ತದೆ. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಗಡೀಪಾರು ಆದೇಶ ಹೊರಡಿಸಿದ ತಕ್ಷಣ ಆರೋಪಿಗಳ ಗಡೀಪಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಆರ್.ಮುನಿಯಪ್ಪರಾಜ್ ಅವರು ನ್ಯಾಯಪೀಠಕ್ಕೆ ತಿಳಿಸಿದರು. ರಿಟ್ ಅರ್ಜಿಯಲ್ಲಿ ಕೋರಿರುವಂತೆ ಈ ಹಂತದಲ್ಲಿ ಪ್ರತ್ಯೇಕ ಗುರುತಿನ ಚೀಟಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಹಂತದಲ್ಲಿ ರಿಟ್ ಅರ್ಜಿಗೆ ಸಂಬಂಧಿಸಿ ಪ್ರತ್ಯೇಕ ಆದೇಶ ಅನಗತ್ಯ ಎನ್ನುವುದು ನಮ್ಮ ಭಾವನೆ. ಶ್ರೀಲಂಕಾ ಹೈಕಮೀಷನ್ ಈಗಾಗಲೇ ಪ್ರಯಾಣ ದಾಖಲೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಮುರುಗನ್ ಮನವಿಯನ್ನು ವಿಲೇವಾರಿ ಮಾಡಲಾಗಿದೆ. ಇದರ ಆಧಾರದಲ್ಲಿ ಚೆನ್ನೈ ಎಫ್‌ಆರ್‌ಆರ್‌ಓ ದಿಂದ ಗಡೀಪಾರು ಆದೇಶ ಬಂದ ತಕ್ಷಣ ಆತನನ್ನು ಆತನ ದೇಶಕ್ಕೆ ಗಡೀಪಾರು ಮಾಡಬಹುದು ಎಂದು ನ್ಯಾಯಪೀಠ ತಿಳಿಸಿದೆ. ಮುನಿಯಪ್ಪರಾಜ್ ಅವರು ಸಾರ್ವಜನಿಕ ಇಲಾಖೆಯಿಂದ ಈ ವಿಷಯದ ಕುರಿತು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಒ) ಅವರಿಗೆ ಬರೆದ ಪತ್ರವನ್ನು ಮಂಡಿಸಿದರು. ಪತ್ರದ ಪ್ರಕಾರ, ಶ್ರೀಲಂಕಾದ ಡೆಪ್ಯುಟಿ ಹೈಕಮಿಷನ್ ಮೂರು ಶ್ರೀಲಂಕಾ ಪ್ರಜೆಗಳಿಗೆ ಸೆಪ್ಟೆಂಬರ್ ೨೨, ೨೦೨೪ ರವರೆಗೆ ಮಾನ್ಯವಾದ ತಾತ್ಕಾಲಿಕ ಪ್ರಯಾಣ ದಾಖಲೆಗಳನ್ನು ನೀಡಿದೆ. ಎಫ್‌ಆರ್‌ಆರ್‌ಒ ಅಗತ್ಯ ಆದೇಶಗಳನ್ನು ನೀಡಿದ ಕೂಡಲೇ ಮೂವರನ್ನು ಶ್ರೀಲಂಕಾಕ್ಕೆ ಗಡೀಪಾರು ಮಾಡಲಾಗುವುದು ಎಂದು ಹೆಚ್ಚುವರಿ ಪಿಪಿ ತಿಳಿಸಿದ್ದಾರೆ. ಪ್ರಯಾಣದ ದಾಖಲೆಗಳನ್ನು ನೀಡಿರುವುದರಿಂದ ಭಾವಚಿತ್ರದ ಗುರುತಿನ ಚೀಟಿ ನೀಡುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಪ್ರಯಾಣದ ದಾಖಲೆಗಳನ್ನು ನೀಡಿರುವುದರಿಂದ ಈ ವಿಷಯದ ಬಗ್ಗೆ ಹೆಚ್ಚಿನ ಆದೇಶದ ಅಗತ್ಯವಿಲ್ಲದ ಕಾರಣ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿದೆ.