ಅಧಿಕಾರಕ್ಕೇರಿದರೆ ಕನಿಷ್ಠ ವೇತನ ೪೦೦ ರೂ.ಗೆ ಏರಿಕೆ: ಖರ್ಗೆ
ದೆಹಲಿ, ಮಾ.೨೭- ಮೋದಿ ಸರ್ಕಾರದ ಕಳೆದ ೧೦ ವರ್ಷಗಳ ಆಡಳಿತದಲ್ಲಿ ನಿಜವಾದ ವೇತನ ಹೆಚ್ಚಳವು ೧ ಪ್ರತಿಶತಕ್ಕಿಂತ ಕಡಿಮೆಯಾಗಿದೆ. ಹಾಗಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕನಿಷ್ಠ ವೇತನವನ್ನು ದಿನಕ್ಕೆ ೪೦೦ ರೂಪಾಯಿಗೆ ಏರಿಸಲಾಗುವುದು. ಅಲ್ಲದೆ ಈ ವೇತನ ನರೇಗಾ ಯೋಜನೆಗೂ ಅನ್ವಯಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ.
ಮೋದಿ ಸರ್ಕಾರವು ೧೦ ವರ್ಷಗಳ ಆಡಳಿತದಲ್ಲಿ ನಿಜವಾದ ವೇತನ ಹೆಚ್ಚಳವು ಒಂದು ಪ್ರತಿಶತಕ್ಕಿಂತ ಕಡಿಮೆಯಾಗಿದೆ. ಅದರೆ ಯುಪಿಎ ಅಧಿಕಾರದ ಅವಧಿಯಲ್ಲಿ ಅಂದರೆ ೨೦೦೯-೧೪ರ ಅವಧಿಯಲ್ಲಿ ಕೃಷಿ ಹಾಗೂ ಕೃಷಿಯೇತರ ವಲಯಗಳಲ್ಲಿ ಇದು ಕ್ರಮವಾಗಿ ಶೇಕಡ ೮.೬ ಮತ್ತು ೬.೯ರಷ್ಟಿತ್ತು ಎಂದು ಖರ್ಗೆ ತಿಳಿಸಿದರು. ಈ ವೇಳೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್, ಕಳೆದ ೧೦ ವರ್ಷಗಳಲ್ಲಿ ನಿರುದ್ಯೋಗ ಹಲವು ಪಟ್ಟು ಹೆಚ್ಚಾಗಿದೆ. ಕೃಷಿಯನ್ನು ಅವಲಂಬಿಸಿರುವ ಜನರ ಸಂಖ್ಯೆಯು ೨೦೧೬ ರಲ್ಲಿ ೪೧% ರಿಂದ ೪೭% ಕ್ಕೆ ಏರಿದೆ ಎಂಬ ಅಂಶದಿಂದ ಇದು ಉತ್ತಮವಾಗಿ ಪ್ರತಿಫಲಿಸುತ್ತದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಕನಿಷ್ಠ ವೇತನ ದಿನಕ್ಕೆ ೧೭೬ ರೂಪಾಯಿ ಇದ್ದು, ಈ ಹಿನ್ನೆಲೆಯಲ್ಲಿ ಖರ್ಗೆ ಹೇಳಿಕೆ ಮಹತ್ವ ಪಡೆದಿದೆ. ಮೋದಿ ಅಧಿಕಾರದ ಅವಧಿಯಲ್ಲಿ ನೈಜ ವೇತನ ಏರಿಕೆ ಸ್ಥಗಿತಗೊಂಡಿತ್ತು. ವೇತನ ಏರಿಕೆಗಿಂತ ಹೆಚ್ಚು ಹಣದುಬ್ಬರ ದಾಖಲಾಗಿತ್ತು. ದುಡಿಯುವ ವರ್ಗಕ್ಕೆ ವೇತನ ಏರಿಕೆಯನ್ನು ಬಹುತೇಕ ಶೂನ್ಯಕ್ಕೆ ಕಡಿಮೆ ಮಾಡಿದ್ದಾರೆ. ಹೆಚ್ಚುತ್ತಿರುವ ಬೆಲೆಗಳು ಹೆಚ್ಚುವರಿ ಹೊರೆ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಆಪಾದಿಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ಈ ಹೇಳಿಕೆಯು ಹೆಚ್ಚು ಗಮನ ಸೆಳೆದಿದ್ದು, ಕಾರ್ಮಿಕ ವರ್ಗವನ್ನು ಸೆಳೆಯುವ ಪ್ರಯತ್ನ ಎಂಬ ಮಾತು ಸದ್ಯ ಕೇಳಿಬರುತ್ತಿದೆ.