ಬಿ.ಎಸ್ ಯಡಿಯೂರಪ್ಪ ಸಂಧಾನ ಸಕ್ಸಸ್; ಕೊನೆಗೂ ಮಣಿದ ರೇಣುಕಾಚಾರ್ಯ ಬಣ
ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೬: ಲೋಕಸಭಾ ಚುನಾವಣೆ ಟಿಕೆಟ್ ವಿಷಯವಾಗಿ ಕೆಲ ಮುಖಂಡರಲ್ಲಿನ ಅಸಮಾಧಾನದ ಬೇಗುದಿ ತಣಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ಯಡಿ ಯೂರಪ್ಪ ಯಶಸ್ವಿಯಾಗಿದ್ದಾರೆ.‌
ಲೋಕಸಭಾ ಚುನಾವಣೆಯ ಮುಂದಿರು ವಾಗಲೇ ಟಿಕೆಟ್ ಬದಲಾವಣೆ… ಮಾಡಬೇಕು ಎಂದು ಪಟ್ಟು ಹಿಡಿದಿದ್ದ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಜಿ. ಕರುಣಾಕರರೆಡ್ಡಿ, ಮಾಜಿ ಶಾಸಕರಾದ ಡಾ.ಎ.ಎಚ್. ಶಿವ ಯೋಗಿಸ್ವಾಮಿ, ಎಂ. ಬಸವರಾಜನಾಯ್ಕ,‌ ಟಿ. ಗುರುಸಿದ್ದನಗೌಡ, ಪುತ್ರ ಡಾ.‌ಟಿ.ಜಿ. ರವಿಕು, ಮುಖಂಡ ಮಾಡಾಳ್ ಮಲ್ಲಿಕಾರ್ಜುನ್,‌ ಮಾಜಿ ಮೇಯರ್ ಅಜಯ್ ಕುಮಾರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್,
ಎಲ್.ಎನ್‌. ಕಲ್ಲೇಶ್ ಇತರರೊಂದಿಗೆ ಮಂಗಳವಾರ ದಾವಣಗೆರೆ ಹೊರ ವಲಯದ ಅಪೂರ್ವ ರೆಸಾರ್ಟ್ ನಲ್ಲಿ ಅತ್ಯಂತ ಮಹತ್ವದ ಸಭೆ ನಡೆಸಿದ ಯಡಿಯೂರಪ್ಪ ಅವರು ಭಿನ್ನ ಮತ ತಣಿಸಿದರು. ಇದರಿಂದ ಕಮಲ ಪಾಳೆಯದಲ್ಲಿನ ಆತಂಕ ದೂರವಾದಂತೆ ಆಗಿದೆ.
ಬಿಜೆಪಿಯ ಸುಭದ್ರಕೋಟೆ ಎಂದೇ ಗುರುತಿಸಲ್ಪಡುವ ದಾವಣಗೆರೆ ಜಿಲ್ಲೆಯಲ್ಲಿ ಭಿನ್ನಮತ, ಅಸಮಾಧಾನ ಇಷ್ಟೊಂದು ಪ್ರಮಾಣದಲ್ಲಿ ಹೊರ ಬಂದಿದ್ದು ಅದೂ ಮಾಜಿ ಸಚಿವರು, ಶಾಸಕರು,‌‌ ವಿವಿಧ ಜನ ಪ್ರತಿನಿಧಿಗಳಿಂದ ಇದೇ ಪ್ರಥಮ.
ಸಂಸದರು ಹೊರ ಜಿಲ್ಲೆಯವರು ಎಂಬ ಕೂಗು ಒಂದೆರೆಡು ಚುನಾವಣೆಯಲ್ಲಿ ವಿಪಕ್ಷಗಳಿಂದ ಕೇಳಿ ಬಂದಿತ್ತು. ಈ ಬಾರಿಯ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಯಲ್ಲೇ ಕೇಳಿ ಬರುವಂತಾಗಿತ್ತು. ಹೊಸಬರಿಗೆ ಟಿಕೆಟ್ ಎನ್ನುವ ಒತ್ತಾಯವು ಪ್ರಬಲವಾಗಿತ್ತು.
ಸ್ವಪಕ್ಷದಲ್ಲೇ ವ್ಯಕ್ತವಾಗುತ್ತಿರುವ ವಿರೋಧದ ಕೂಗಿನ ಸುಳಿವರಿತ ಹೈಕಮಾಂಡ್ ಸಿದ್ದೇಶ್ವರ ಬದಲಿಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡುವ ಮೂಲಕ ಅಸಮಾಧಾನ ತಣಿಸುವ ಕೆಲಸ ಮಾಡಿತು. ಆದರೂ, ಮುಖಂಡರಲ್ಲಿ ಬೇಗುದಿ ಮುಂದುವರಿ ದಿದೆ. ಘೋಷಿತ ಅಭ್ಯರ್ಥಿಯ ಬದಲಾವಣೆಯ ಕೂಗು ಹೆಚ್ಚಾಗುತ್ತಲೇ ಇತ್ತು.
ದಾವಣಗೆರೆ ಬಿಜೆಪಿಯಲ್ಲಿನ ಭಿನ್ನಮತ ‌ಅತೀ ಮುಖ್ಯವಾಗಿ ಮುಖಂಡರಲ್ಲಿನ ಅಸಮಾಧಾನ, ಬೇಗುದಿ, ಸರಣಿ ಸಭೆಯ ಮಾಹಿತಿ ವರಿಷ್ಠರ ಗಮನಕ್ಕೆ ಬಂದಿದ್ದು, ಸೋಮವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ಸಂಸದ ಸಿದ್ದೇಶ್ವರ, ಶಾಸಕ ಬಿ.ಪಿ.‌ಹರೀಶ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಇತರರು ಸುಧೀರ್ಘ ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸಿದರು.
ಸ್ವತಃ ಯಡಿಯೂರಪ್ಪ ಅವರೇ ಭಿನ್ನಮತ ಶಮನದ ಸಾರಥ್ಯ ವಹಿಸಿಕೊಂಡು ದಾವಣಗೆರೆಗೆ ಆಗಮಿಸಿ ಅಸಮಾಧಾನಿತ ನಾಯಕರ ಗುಂಪಿನ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದಂತಹವರು, ಯಾವ ಕಾರಣಕ್ಕೆ ವಿರೋಧ… ಎಂಬುದನ್ನು ಸವಿವರವಾಗಿ ಮುಖಂಡರ ಮುಂದಿಟ್ಟರು ಎನ್ನಲಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಚಿವರಾದ ಬಿ.ಎಸ್‌. ಬಸವರಾಜ್ ( ಭೈರತಿ), ಶಂಕರಪಾಟೀಲ್ ಮುನೇನ ಕೊಪ್ಪ, ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ಪಿ.ಸಿ. ಶ್ರೀನಿವಾಸ್, ಧನಂಜಯ ಕಡ್ಲೇಬಾಳು, ಅನಿಲ್ ಕುಮಾರ್ ನಾಯ್ಕ ಇತರರು ಇದ್ದರು.