ಕದನ ವಿರಾಮಕ್ಕೆ ನಿರ್ಣಯ ದೂರ ಉಳಿದ ಅಮೆರಿಕಾ
ನ್ಯೂಯಾರ್ಕ್, ಮಾ.೨೬- ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ದದ ಹಲವು ತಿಂಗಳುಗಳ ಬಳಿಕ ಇದೀಗ ತಕ್ಷಣದ ಕದನ ವಿರಾಮಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯಕ್ಕೆ ಬರಲಾಗಿದೆ. ಭದ್ರತಾ ಮಂಡಳಿಯ ೧೪ ಸದಸ್ಯರು ಅಲ್ಜೀರಿಯಾ ಭಾಗಶಃ ರಚಿಸಿದ ನಿರ್ಣಯದ ಪರವಾಗಿ ಮತ ಹಾಕಿದರೆ ಇಸ್ರೇಲ್‌ನ ಪರಮಾಪ್ತ ರಾಷ್ಟ್ರವಾಗಿರುವ ಅಮೆರಿಕಾ ಮತದಾನದಿಂದ ದೂರ ಉಳಿದಿದ್ದು, ಅಚ್ಚರಿಗೆ ಕಾರಣವಾಗಿದೆ. ಸಹಜವಾಗಿಯೇ ಅಮೆರಿಕಾ ನಡೆಯಿಂದ ಇಸ್ರೇಲ್ ಪಾಳಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇದಕ್ಕೂ ಮುನ್ನ ಇಸ್ರೇಲ್ ನಡೆಸುತ್ತಿರುವ ಭೀಕರ ಆಕ್ರಮಣಗಳಿಗೆ ತಡೆ ನೀಡಬೇಕೆಂದು ಭದ್ರತಾ ಮಂಡಳಿಯ ಮೂರು ನಿರ್ಣಯಗಳ ಕರಡುಗಳ ವಿರುದ್ಧ ಅಮೆರಿಕಾವು ವೀಟೋ ಅಧಿಕಾರ ಚಲಾಯಿಸುವ ಮೂಲಕ ಇಸ್ರೇಲ್ ನೆರವಿಗೆ ಬಂದಿತ್ತು. ಆದರೆ ಕದನ ನಿಲ್ಲಿಸಲು ಜಾಗತಿಕ ಮಟ್ಟದಲ್ಲಿ ಆಗ್ರಹ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಅದೂ ಅಲ್ಲದೆ ತೀರಾ ಒತ್ತಡದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸದ್ಯದ ನಿರ್ಣಯದಿಂದ ಅಮೆರಿಕಾ ದೂರ ಉಳಿದುಕೊಂಡಿದೆ. ಇನ್ನು ಕದನ ವಿರಾಮದ ಕರಡಿನಲ್ಲಿ ‘ಶಾಶ್ವತ ಕದನ ವಿರಾಮ’ ಪದವನ್ನು ತೆಗೆದುಹಾಕಿರುವುದರ ವಿರುದ್ಧ ರಷ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ ಮತದಾನಕ್ಕೆ ಕರೆ ನೀಡಿತ್ತು. ಆದರೆ ಅದು ಅಂಗೀಕಾರವನ್ನು ಪಡೆಯುವಲ್ಲಿ ವಿಫಲತೆ ಕಂಡಿತು. ಇನ್ನು ಭದ್ರತಾ ಮಂಡಳಿಯಲ್ಲಿ ಅರಬ್ ಬ್ಲಾಕ್‌ನ ಸದಸ್ಯ ರಾಷ್ಟ್ರವಾಗಿರುವ ಅಲ್ಜೀರಿಯಾವು ಸ್ಲೊವೇನಿಯಾ ಮತ್ತು ಸ್ವಿಟ್ಜರ್‌ಲ್ಯಾಂಡ್ ಸೇರಿದಂತೆ ವಿವಿಧ ದೇಶಗಳೊಂದಿಗೆ ಕರಡು ನಿರ್ಣಯವನ್ನು ರಚಿಸಿದೆ. ಗಾಜಾ ಪಟ್ಟಿಯಲ್ಲಿ ಸುಮಾರು ಆರು ತಿಂಗಳುಗಳಿಂದ ನಡೆಯುತ್ತಿರುವ ಇಸ್ರೇಲ್ ದಾಳಿಗೆ ಸಂಬಂಧಿಸಿ “ಯುದ್ಧವಿರಾಮ” ಎಂಬ ಪದ ಬಳಕೆಯನ್ನು ಅಮೆರಿಕ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದೆ. ಇದಕ್ಕೂ ಮೊದಲು ಇಸ್ರೇಲ್‌ನ್ನು ರಕ್ಷಿಸಲು ಅದು ವೀಟೊ ಅಧಿಕಾರವನ್ನೂ ಚಲಾಯಿಸಿತ್ತು. ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಯಲ್ಲಿ ಈಗಾಗಲೇ ೩೨,೦೦೦ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹಾಗಾಗಿ, ಗಾಜಾದಲ್ಲಿ ಯುದ್ಧ ವಿರಾಮ ಏರ್ಪಡಬೇಕು ಎಂಬ ಹೆಚ್ಚುತ್ತಿರುವ ಜಾಗತಿಕ ಒತ್ತಡದ ಹಿನ್ನೆಲೆಯಲ್ಲಿ ಮಾರ್ಚ್ ೨೫ರಂದು ನಡೆದ ಮತದಾನಕ್ಕೆ ಅಮೆರಿಕಾ ಗೈರುಹಾಜರಾಗಿತ್ತು. ಹಾಗಾಗಿ ತಕ್ಷಣ ಯುದ್ಧವಿರಾಮ ಜಾರಿಗೆ ಬರಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಾಧ್ಯವಾಗಿದೆ. ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಮತ್ತು ಯಾವುದೇ ಷರತ್ತು ವಿಧಿಸದೆ ಬಿಡುಗಡೆಗೊಳಿಸಬೇಕು ಎಂಬುದಾಗಿಯೂ ನಿರ್ಣಯ ಒತ್ತಾಯಿಸಿದೆ.
ಇಸ್ರೇಲ್ ನಿಯೋಗದ ಅಮೆರಿಕಾ ಭೇಟಿ ರದ್ದು!
ಒಂದೆಡೆ ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತಿದ್ದಂತೆ ಮತ್ತೊಂದೆಡೆ ಮುಂದೆ ಅಮೆರಿಕಾಗೆ ತೆರಳಬೇಕಿದ್ದ ಇಸ್ರೇಲ್ ನಿಯೋಗದ ಭೇಟಿಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ರದ್ದುಗೊಳಿಸಿದ್ದಾರೆ. ಕದನ ವಿರಾಮದ ನಿರ್ಣಯವನ್ನು ಅಮೆರಿಕಾ ವೀಟೋ ಮಾಡದೇ ಇರುವುದು ಇಸ್ರೇಲ್ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿಯೇ ಅಮೆರಿಕಾ ನಿಯೋಗದ ಭೇಟಿಯನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಜಮಿನ್, ಅಮೆರಿಕಾ ನಡೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಹಿಂದೆ ಯೋಜಿಸಿದಂತೆ ನಿಯೋಗವನ್ನು ಯುಎಸ್‌ಗೆ ಕಳುಹಿಸುವುದಿಲ್ಲ. ನಿರ್ಣಯವನ್ನು ತಡೆಯುವಲ್ಲಿ ಅಮೆರಿಕಾ ವಿಫಲಗೊಂಡಿದ್ದೇ ನಿಯೋಗದ ಭೇಟಿ ರದ್ದತಿಗೆ ಕಾರಣ. ಇದರಿಂದ ಹಮಾಸ್ ವಿರುದ್ಧದ ಯುದ್ದಕ್ಕೆ ಹಿನ್ನಡೆಯಾಗಲಿದ್ದು, ಅಲ್ಲದೆ ೧೩೦ ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಯತ್ನಗಳಿಗೆ ಹಾನಿ ಮಾಡುತ್ತದೆ ಎಂದು ತಿಳಿಸಿದ್ದಾರೆ.