ಅಮೆರಿಕಾ ಭೇಟಿಯಲ್ಲಿ ಇಸ್ರೇಲ್ ಮಿಲಿಟರಿ ಮೇಲುಗೈಗೆ ಆದ್ಯತೆ
ಜೆರುಸಲೆಂ (ಇಸ್ರೇಲ್), ಮಾ.೨೫- ಮುಂದಿನ ಅಮೆರಿಕಾ ಭೇಟಿಯ ಮಾತುಕತೆಯ ವೇಳೆ ನಾನು ಇಸ್ರೇಲ್ ಮಿಲಿಟರಿಯ ಮೇಲುಗೈಗೆ ಹಾಗೂ ಮಧ್ಯಪ್ರಾಚ್ಯದಲ್ಲಿ ದೇಶದ ಮಿಲಿಟರಿ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ತಿಳಿಸಿದ್ದಾರೆ.
ನನ್ನ ಅಮೆರಿಕಾ ಭೇಟಿಯ ಸಮಯದಲ್ಲಿ ಹಮಾಸ್ ವಿರುದ್ಧ ವಿಜಯ ಮತ್ತು ಒತ್ತೆಯಾಳುಗಳನ್ನು ಮನೆಗೆ ಹಿಂದಿರುಗಿಸುವುದು ಸೇರಿದಂತೆ ಇಸ್ರೇಲ್‌ನ ಗುಣಾತ್ಮಕ ಮಿಲಿಟರಿ ಮೇಲುಗೈಯನ್ನು ಸಂರಕ್ಷಿಸುವ ಮತ್ತು ನಮ್ಮ ಸಾಮಾನ್ಯ ಗುರಿಗಳನ್ನು ಸಾಧಿಸುವ ಮಾರ್ಗಗಳ ಮೇಲೆ ಕೇಂದ್ರೀಕರಿಸುತ್ತೇನೆ. ಮಿಲಿಟರಿ ಸಾಮರ್ಥ್ಯದ ಕುರಿತಾದ ಚರ್ಚೆಗಳು ಇಸ್ರೇಲ್‌ನ ವೇದಿಕೆಗಳು ಮತ್ತು ಯುದ್ಧಸಾಮಗ್ರಿಗಳನ್ನು ಪಡೆಯುವ ಸಾಮರ್ಥ್ಯವನ್ನು ಒಳಗೊಂಡಿರುತ್ತವೆ. ಇಸ್ರೇಲ್‌ನ ಉತ್ತರದ ಸಮುದಾಯಗಳನ್ನು ಅವರ ಮನೆಗಳಿಗೆ ಹಿಂದಿರುಗಿಸುವ ಅಗತ್ಯವನ್ನು ನಾವು ಚರ್ಚಿಸಲಿದ್ದೇವೆ. ಇದನ್ನು ಮಿಲಿಟರಿ ಕ್ರಿಯೆಯ ಮೂಲಕ ಅಥವಾ ಒಪ್ಪಂದದ ಮೂಲಕ ಸಾಧಿಸಬಹುದಾಗಿದೆ ಎಂದು ಗ್ಯಾಲಂಟ್ ತಿಳಿಸಿದ್ದಾರೆ. ಅಮೆರಿಕಾ ಭೇಟಿಯ ವೇಳೆ ಗ್ಯಾಲಂಟ್ ಅವರು ಅಲ್ಲಿನ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಇತ್ತೀಚಿಗಷ್ಟೇ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಇಸ್ರೇಲ್‌ಗೆ ಭೇಟಿ ನೀಡಿ, ಗಾಝಾ ಮೇಲಿನ ಯುದ್ದದ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅಮೆರಿಕಾ ಹಾಗೂ ಇಸ್ರೇಲ್ ಒಳ್ಳೆಯ ಮಿತ್ರರಾಷ್ಟ್ರವಾಗಿದ್ದರೂ ಗಾಝಾದಲ್ಲಿ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವುದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಕೊಂಚ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.