ಸುಪ್ರೀಂ ಕದ ತಟ್ಟಿದ ಸಿಎಂ ವಿರುದ್ಧ ಬಿವೈವಿ ಆಕ್ರೋಶ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮಾ.೨೪:ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡಬೇಕೆಂದು ಕೋರಿ ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಕದ ತಟ್ಟಿರುವ ಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬರ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಹಾಗೂ ತಮ್ಮ ಬೇಜವಾಬ್ದಾರಿಗಳನ್ನು ಮುಚ್ಚಿಟ್ಟುಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸಲು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದು ರಾಜಕೀಯ ಪ್ರೇರಿತವಾಗಿದ್ದು, ದೇಶದ ಒಕ್ಕೂಟ ವ್ಯವಸ್ಥೆಯನ್ನು ಅಪಮಾನಿಸುವ ಮತ್ತು ಕರ್ನಾಟಕದ ಘನತೆ ಕುಗ್ಗಿಸುವ ತಪ್ಪು ನಿರ್ಧಾರವಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ ಏನು ಮಾಡಿತ್ತೋ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿತ್ತೋ ಎಂಬ ಅಂಕಿ-ಅಂಶಗಳನ್ನು ಪ್ರಸ್ತಾಪಿಸಿ ರಾಜ್ಯಸರ್ಕಾರದ ಕ್ರಮವನ್ನು ತರಾಟೆಗೆ ತೆಗದುಕೊಂಡಿದ್ದಾರೆ.
ಕೈಲಾಗದವನು ಮೈಪರಚಿಕೊಂಡ ಎಂಬಂತೆ ಮುಖ್ಯಮಂತ್ರಿಗಳು ತಮ್ಮ ಎಲ್ಲ ಎಡವಟ್ಟುಗಳಿಗೂ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುವ ಮೂಲಕ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕುಟಿಲತನ ಪ್ರದರ್ಶಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಈ ಹಿಂದೆ ಪ್ರವಾಹ, ನೈಸರ್ಗಿಕ ವಿಕೋಪಗಳು ಎದುರಾಗಿದಾಗ್ದ ಬಿಜೆಪಿ ಸರ್ಕಾರ ಕೇಂದ್ರದ ನೆರವಿಗೆ ಕಾಯದೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಸಮತೋಲನ ಕಾಯ್ದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಪರಿಹಾರ ಒದಗಿಸಿತ್ತು. ಆದರೆ, ಈಗ ಸಿದ್ದರಾಮಯ್ಯರವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ತಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಹಾಗೂ ಜನರ ದಿಕ್ಕು ತಪ್ಪಿಸಲು ಜನವಿರೋಧಿ ಆಡಳಿತದ ಕರಾಳ ಮುಖವನ್ನು ಬಯಲು ಮಾಡಲು ಹೊರಟಿದೆ ಎಂದು ದೂರಿದರು.
ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ೨೦೧೯ರಲ್ಲಿ ೯, ೭೨,೫೧೭ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿತ್ತು. ಆ ಸಂದರ್ಭದಲ್ಲಿ ೬,೭೧,೩೧೪ ಫಲಾನುಭವಿಗಳಿಗೆ ೧,೫೩೨.೨೦ ಕೋಟಿ ರೂ. ಪರಿಹಾರ ನೀಡಿದ್ದರು. ಅದೇ ರೀತಿ ೨೦೨೦ರಲ್ಲಿ ೧೯,೬೮,೨೪೭ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದಾಗ ೧೨,೦೦,೩೪೬ ಫಲಾನುಭವಿಗಳಿಗೆ ೯೪೧.೭೦ ಕೋಟಿ ರೂ. ಪರಿಹಾರ ನೀಡಲಾಗಿತ್ತು ಎಂದರು.
೨೦೨೧ರಲ್ಲಿ ೧೪,೯೩,೮೧೧ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಆಗಲೂ ೧೮,೫೬೦.೮೩ ಫಲಾನುಭವಿಗಳಿಗೆ ೨,೪೪೬,೧೦ ಕೋಟಿ ರೂ. ಪರಿಹಾರ ನೀಡಲಾಗಿತ್ತು.
೨೦೨೨ರಲ್ಲಿ ೧೩,೦೯,೪೨೧ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು, ೧೪,೬೨,೮೪೧ ಫಲಾನುಭವಿಗಳಿಗೆ ೨,೦೩೧ ಕೋಟಿ ರೂ. ಪರಿಹಾರ ನೀಡಲಾಗಿತ್ತು ಎಂದು ಅಂಕಿ-ಅಂಶದ ಮೂಲಕ ಮಾಹಿತಿ ನೀಡಿದ್ದಾರೆ.
ಸಿದ್ದರಾಮಯ್ಯರವರೇ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜತೆ ಯಾವ ರೀತಿ ವ್ಯವಹರಿಸಬೇಕು ಎಂಬುದನ್ನು ಬರಪೀಡಿತ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ನೋಡಿ ಕಲಿಯಬೇಕಾಗಿದೆ. ಇದುವರೆಗೂ ಸುಮ್ಮನಿದ್ದು, ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾದ ನಂತರ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಆದರೆ, ರಾಜ್ಯದ ಜನ ಪ್ರಬುದ್ಧರಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಜಯೇಂದ್ರ ತಿರುಗೇಟು ನೀಡಿದರು.