ಜೈಲಿನಿಂದಲೇ ಕೇಜ್ರಿ ಆಡಳಿತ
ದೆಹಲಿ ನೀರಿನ ಸಮಸ್ಯೆಗೆ ಕ್ರಮ ಕೈಗೊಳ್ಳಿ, ಮಂತ್ರಿ ಅತಿಶಿಗೆ ಪತ್ರ ಬರೆದ ಸಿಎಂ
ನವದೆಹಲಿ,ಮಾ.೨೪:ಮದ್ಯ ನೀತಿ ಹಗರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದಕೇಜ್ರಿವಾಲ್,ಜೈಲಿನಿಂದಲೇ ಆಡಳಿತ ನಡೆಸಿದ್ದಾರೆ. ರಾಜಧಾನಿ ದೆಹಲಿಯಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಬಗ್ಗೆ ಜೈಲಿನಿಂದಲೇ ಮೊದಲ ಆದೇಶ ಹೊರಡಿಸಿದ್ದಾರೆ.
ಜಲಸಂಪನ್ಮೂಲ ಖಾತೆ ನಿರ್ವಹಿಸುತ್ತಿರುವ ಅತಿಶಿ ಅವರಿಗೆ ಈ ಸಂಬಂಧ ಆದೇಶ ಕಳುಹಿಸಿದ್ದಾರೆ. ಈ ಬಗ್ಗೆ ಅವರು ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಪ್ರಕಟಣೆ ಹೊರಡಿಸಲಿದ್ದಾರೆ.
ಕೇಜ್ರಿವಾಲ್ ಅವರು ಜೈಲಿನಿಂದಲೇ ಸಚಿವರಿಗೆ ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ಅತಿಶಿ, ಕೇಜ್ರಿವಾಲ್ ಅವರು ದೆಹಲಿ ನಿವಾಸಿಗಳು ಎದುರಿಸುತ್ತಿರುವ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಜೈಲಿನಿಂದಲೇ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ೨ ಕೋಟಿ ದೆಹಲಿ ಜನರನ್ನು ತಮ್ಮ ಕುಟುಂಬವೆಂದು ಭಾವಿಸಿರುವ ಕೇಜ್ರಿವಾಲ್ ಅವರಿಂದ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು ಕೇಜ್ರಿವಾಲ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿರಬಹುದು, ಅವರಿಗೆ ದೆಹಲಿ ಜನರ ಬಗ್ಗೆ ಇರುವ ಪ್ರೀತಿ ಮತ್ತು ಕಾಳಜಿ ಕಟ್ಟಿಹಾಕಲು ಸಾಧ್ಯವಿಲ್ಲ. ಕೇಜ್ರಿವಾಲ್ ಅವರು ಜೈಲಿನಲ್ಲಿದ್ದರೂ ಯಾವುದೇ ಕೆಲಸಕಾರ್ಯಗಳು ನಿಲ್ಲುವುದಿಲ್ಲ ಎಂದು ಹೇಳಿದರು.
ಕೇಜ್ರಿವಾಲ್ ಅವರು ಬರೆದಿರುವ ಪತ್ರವನ್ನು ಓದಿರುವ ಅವರು, ದೆಹಲಿಯ ಹಲವೆಡೆ ನೀರು ಸರಬರಾಜು ಮತ್ತು ಒಳಚರಂಡಿ ಸಮಸ್ಯೆಗಳು ತಲೆದೋರಿವೆ. ಈ ಚಿಂತೆ ನನ್ನನ್ನು ಕಾಡುತ್ತಿದೆ. ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು, ಈ ಮೂಲಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ತಕ್ಷಣ ಪರಿಹಾರ ಸಿಗಬೇಕು. ಅಗತ್ಯ ಬಿದ್ದರೆ ಲೆಫ್ಟಿನೆಂಟ್ ಗೌರ್‍ನರ್ ಅವರಿಂದ ನೆರವು ಪಡೆಯಬೇಕು. ಅವರು ಖಂಡಿತವಾಗಿಯೂ ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾಗಿ ಅವರು ತಿಳಿಸಿದರು.
ಕೇಜ್ರಿವಾಲ್ ಬಂಧನಕ್ಕೊಳಗಾದ ನಂತರ ದೆಹಲಿ ಜನತೆಯ ಬಗ್ಗೆ ಸದಾ ಆಲೋಚನೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ. ಅಕ್ರಮ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.
ಆದರೆ, ಕೇಜ್ರಿವಾಲ್ ಬಂಧನವಾಗಿದ್ದರೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದೆ ಆಡಳಿತ ನಡೆಸುತ್ತಿದ್ದಾರೆ. ಮತ್ತೊಂದೆಡೆ ಜೈಲಿನಲ್ಲೇ ಮುಖ್ಯಮಂತ್ರಿ ಕಚೇರಿ ತೆರೆಯುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಕೇಜ್ರಿವಾಲ್ ೨೮ರವರೆಗೆ ಜಾರಿನಿರ್ದೇಶನಾಲಯದ ವಶಕ್ಕೆ ಒಪ್ಪಿಸಲಾಗಿದೆ.
ಬಂಧನ ಪ್ರಶ್ನಿಸಿ ಕೋರ್ಟಿಗೆ ಮೊರೆ
ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ “ಅಕ್ರಮ” ಬಂಧನ ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಯನ್ನು ಹೋಳಿ ರಜೆಯ ನಂತರ ಬುಧವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ಹೈಕೋರ್ಟ್ ಮೂಲಗಳು ತಿಳಿಸಿವೆ. ಈ ನಡುವೆ ಕೇಜ್ರಿವಾಲ್ ಅವರನ್ನು ಮಾರ್ಚ್ ೨೮ರ ತನಕ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.
ಮಾಜಿ ಐಆರ್‌ಎಸ್ ಅಧಿಕಾರಿ ಹಾಗು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರು ತಮ್ಮ ಪತಿಯನ್ನು ಬಂಧನ ಮಾಡಿರುವ ಕ್ರಮ ಕಾನೂನುಬಾಹಿರವಾಗಿದೆ ಮತ್ತು ಅವರು ತಕ್ಷಣ ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ
ಬಲವಂತದ ಕ್ರಮದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಒಂದು ವಾರದಲ್ಲಿ ಮುಖ್ಯಮಂತ್ರಿಗಳು ಹೈಕೋರ್ಟ್‌ನ ಬಾಗಿಲು ತಟ್ಟಿರುವುದು ಇದು ಮೂರನೇ ಬಾರಿ.
ಇದಕ್ಕೂ ಮೊದಲು, ಅವರು ತಮ್ಮ ವಿರುದ್ಧ ಹೊರಡಿಸಲಾದ ಇಡಿ ಸಮನ್ಸ್ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಮತ್ತು ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಅರ್ಜಿಯಲ್ಲಿ, ಅರವಿಂದ್ ಕೇಜ್ರಿವಾಲ್ ಅವರು ವಿರೋಧ ಪಕ್ಷದ ನಾಯಕ ಮತ್ತು ಇಂಡಿಯಾ ಬ್ಲಾಕ್‌ನಲ್ಲಿ ಪಾಲುದಾರರಾಗಿದ್ದಾರೆ
ಜಾರಿ ನಿರ್ದೇಶನಾಲಯ ಕೇಂದ್ರದ ನಿಯಂತ್ರಣದಲ್ಲಿದ್ದು ಲೋಕಸಭೆ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಹತ್ತಿಕ್ಕಲು “ಆಯುಧವಾಗಿ ಬಳಸಲಾಗುತ್ತಿದೆ ಎಂದು ದೂರಿದ್ದಾರೆ