ಹಿಂದೂ ಮಹಾಸಾಗರ ಸುರಕ್ಷತೆ ಬದ್ಧ: ಅಡ್ಮಿರಲ್ ಹರಿಕುಮಾರ್
ನವದೆಹಲಿ,ಮಾ.೨೪-ಹಿಂದೂ ಮಹಾಸಾಗರವನ್ನು ಹೆಚ್ಚು ಸುರಕ್ಷಿತ ಪ್ರದೇಶವನ್ನಾಗಿ ಮಾಡಲು ನೌಕಾಪಡೆ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಹೇಳಿದ್ದಾರೆ. ಇದರೊಂದಿಗೆ ಕಳೆದ ೧೦೦ ದಿನಗಳಲ್ಲಿ ಕಡಲ್ಗಳ್ಳರ ವಿರುದ್ಧ ನೌಕಾಪಡೆ ಕೈಗೊಂಡ ಕ್ರಮವನ್ನೂ ಪ್ರಸ್ತಾಪಿಸಿದ್ದಾರೆ.
ಭಾರತೀಯ ನೌಕಾಪಡೆಯು ಸುರಕ್ಷಿತ ಹಿಂದೂ ಮಹಾಸಾಗರ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ.ಆದರೆ ಪಶ್ಚಿಮ ಹಿಂದೂ ಮಹಾಸಾಗರದ ಪರಿಸ್ಥಿತಿಯು ಅಸ್ಥಿರವಾಗಿದೆ ಮತ್ತು ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಭಾರತೀಯ ನೌಕಾಪಡೆಯು ಅಲ್ಲಿ ನಿಯೋಜಿಸಲ್ಪಡುತ್ತದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಹೇಳಿದ್ದಾರೆ .ಕಳೆದ ೧೦೦ ದಿನಗಳಲ್ಲಿ ನೌಕಾಪಡೆ ನಡೆಸಿದ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗಳನ್ನು ಉಲ್ಲೇಖಿಸಿದ ಅವರು, ಕಡಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಕಡಲ್ಗಳ್ಳತನ, ಕ್ಷಿಪಣಿ ಮತ್ತು ಡ್ರೋನ್ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಿದ್ದೇವೆ ಎಂದು ಹೇಳಿದ್ದಾರೆ. ನಾವು ಆಪರೇಷನ್ ಸಂಕಲ್ಪ್ ಮೂಲಕ ೪೫ ಭಾರತೀಯರು ಮತ್ತು ೬೫ ವಿದೇಶಿ ಪ್ರಜೆಗಳು ಸೇರಿದಂತೆ ೧೧೦ ಜನರ ಪ್ರಾಣವನ್ನು ಉಳಿಸಿದ್ದೇವೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜಧಾನಿ ನವದೆಹಲಿಯ ನೌಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಡ್ಮಿರಲ್ ಕುಮಾರ್, ಹೌತಿ ಬಂಡುಕೋರರು ಇದುವರೆಗೆ ಭಾರತದ ಯಾವುದೇ ಧ್ವಜವಿರುವ ಹಡಗನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದ್ದಾರೆ .ನವೆಂಬರ್ ೨೦೨೩ ರಿಂದ, ೯೦ ಕ್ಕೂ ಹೆಚ್ಚು ಕಡಲ ಘಟನೆಗಳು ನಡೆದಿವೆ, ಅದರಲ್ಲಿ ೫೭ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು, ೩೯ ಕಡಲ್ಗಳ್ಳತನ, ಅಪಹರಣ ಮತ್ತು ಇತರ ಚಟುವಟಿಕೆಗಳನ್ನು ಒಳಗೊಂಡಿವೆ ಎಂದು ಪ್ರಸ್ತುತಿಯ ಮೂಲಕ ತಿಳಿಸಲಾಗಿದೆ.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅಡ್ಮಿರಲ್ ಕುಮಾರ್, ಭಾರತವು ಮಹಾನ್ ಶಕ್ತಿಯಾಗುವ ಹಾದಿಯಲ್ಲಿದೆ ಎಂದು ಹೇಳಿದರು. ದೊಡ್ಡ ಶಕ್ತಿಯೊಂದಿಗೆ ದೊಡ್ಡ ಜವಾಬ್ದಾರಿ ಬರುತ್ತದೆ. ಭಾರತೀಯ ನೌಕಾಪಡೆಯು ಕಡಲ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು, ಸಂರಕ್ಷಿಸಲು, ಉತ್ತೇಜಿಸಲು ಮತ್ತು ಮುನ್ನಡೆಸಲು ಬದ್ಧವಾಗಿದೆ. ಹಿಂದೂ ಮಹಾಸಾಗರ ಸುರಕ್ಷಿತವಾಗುವವರೆಗೆ ನೌಕಾ ಕಾರ್ಯಾಚರಣೆ ಎಷ್ಟು ದಿನ ಮುಂದುವರಿಯುತ್ತದೆ ಎಂಬುದಕ್ಕೆ ಪ್ರತಿಕ್ರಿಯಿಸಿದರು. ಒಂದು ದಿನದ ಹಿಂದೆ ಸೊಮಾಲಿಯಾ ಕರಾವಳಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ೩೫ ಕಡಲ್ಗಳ್ಳರೊಂದಿಗೆ ಐಎನ್‌ಎಸ್ ಕೋಲ್ಕತ್ತಾ ಮುಂಬೈ ತಲುಪಿದೆ ಎಂದು ನೌಕಾಪಡೆ ತಿಳಿಸಿದೆ. ಭಾರತೀಯ ಕಾನೂನು, ಕಡಲ್ಗಳ್ಳತನ ವಿರೋಧಿ ಕಾಯ್ದೆ- ೨೦೨೨ ರ ಅಡಿಯಲ್ಲಿ ಕಡಲ್ಗಳ್ಳರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಕ್ರಮಕ್ಕಾಗಿ ಎಲ್ಲಾ ಆರೋಪಿಗಳನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯ ಭಾಗವಾಗಿ, ನೌಕಾಪಡೆಯು ಭಾರತೀಯ ತೀರದಿಂದ ೨೬೦೦ ಕಿಲೋಮೀಟರ್ ದೂರದಲ್ಲಿರುವ ಕಡಲ್ಗಳ್ಳರ ವಿರುದ್ಧ ಕ್ರಮ ಕೈಗೊಂಡಿದೆ ಎಂದರು.