ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ: ದಯಾನಂದ್
ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ೧೫ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲು ನೆರವಾದ ಸ್ಟಾರ್ ಗೋಲ್ಡ್ ಕಂಪನಿಯ ಮಾಲೀಕ ಶ್ರೀಕಾಂತ್.ವಿ ಅವರಿಗೆ ಪ್ರಶಂಸೆ ಪತ್ರ ನೀಡಿ ಗೌರವಿಸಿದರು ಡಿಸಿಪಿ ಸೈದುಲು ಅಡಾವತ್ ಇದ್ದಾರೆ.
ಬೆಂಗಳೂರು,ಮಾ.೨೪-ಮನೆಗಳವು,ವಾಹನಗಳವು,ಸರ ಅಪಹರಣ ಇನ್ನಿತರ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು. ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಾರ್ವಜನಿಕರು ಸಹಕರಿಸಿದರೆ ಸವಾಲಾಗಿರುವ ಅಪರಾಧ ಕೃತ್ಯಗಳನ್ನು ಬೇಧಿಸಬಹುದು ಎಂದರು.
ಸರಕಳವು,ಕನ್ನಗಳವು,ಮನೆಗಳ್ಳತನ,ಇನ್ನಿತರ ಅಪರಾಧಗಳ ತಡೆಗೆ ಸಾರ್ವಜನಿಕರ ನೆರವಿನಲ್ಲಿ ‘ಪೊಲೀಸ್ ಪಬ್ಲಿಕ್ ಬೀಟ್ ಜಾರಿಗೆ ತರಲು ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.ಪೊಲೀಸರ ಜೊತೆ ಸ್ವಯಂಸೇವಕರಾಗಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಅವಕಾಶ ಮಾಡಿಕೊಡಿ ಎಂಬ ಸಭಿಕರೊಬ್ಬರ ಕೋರಿಕೆ ಪ್ರತಿಕ್ರಿಯಿಸಿದ ಕಮೀಷನರ್ ಹಿಂದೆ ನಗರದಲ್ಲಿ ಜಾರಿಯಲ್ಲಿದ್ದ ನೆರೆಹೊರೆ ಬೀಟ್ ನ್ನು ಕೆಲವರು ದುರ್ಬಳಕೆ ಮಾಡಿಕೊಂಡ ಕಾರಣದಿಂದ ರದ್ದು ಮಾಡಲಾಗಿದೆ ಎಂದರು. ನಗರದಲ್ಲಿ ಅಪರಾಧ ಕೃತ್ಯಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮುಂದಿನ ದಿನಗಳಲ್ಲಿ ಪೊಲೀಸ್ ಪಬ್ಲಿಕ್ ಬೀಟ್ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ನಡೆಯುವ ಹಲವು ಅಪರಾಧ ಕೃತ್ಯಗಳ ಬಗ್ಗೆ ಭಯದಿಂದ ದೂರು ನೀಡದೆ ಹಿಂಜರಿಯುವವರ ನಡುವೆ ಶ್ರೀ ಸ್ಟಾರ್ ಗೋಲ್ಡ್ ಕಂಪನಿಯ ಮಾಲೀಕ ಶ್ರೀಕಾಂತ್.ವಿ ಸುಮಾರು ಮೂರು ವರ್ಷದಿಂದ ತಮ್ಮ ಅಂಗಡಿಗೆ ಬರುವ ಅನುಮಾನಸ್ಪದ ಗ್ರಾಹಕರ ಮಾಹಿತಿಯನ್ನು ನೀಡುತ್ತಿದ್ದು,ಅವರ ಸಮಯಪ್ರಜ್ಞೆಯಿಂದ ಇಲ್ಲಿಯವರೆಗೆ ೧೫ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ ಎಂದರು. ಶ್ರೀಕಾಂತ್.ವಿ ಅವರ ಸಮಯಪ್ರಜ್ಞೆಯನ್ನು ಸಾರ್ವಜನಿಕರು ರೂಡಿಸಿಕೊಂಡರೇ ಆರೋಪಿಗಳನ್ನು ಪತ್ತೆಹಚ್ಚುವುದು ಸುಲಭ ಸಾಧ್ಯವಾಗಲಿದ್ದು, ಇಲಾಖೆಯು ಶ್ರೀಕಾಂತ್ ಧೈರ್ಯವನ್ನು ಗುರುತಿಸಿ ಅಭಿನಂದಿಸಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಕೆಲವೊಂದು ಪ್ರಶ್ನೆಗಳಿಗೆ ಸ್ಥಳದಲ್ಲಿ ಕ್ರಮ ತೆಗೆದುಕೊಂಡರು, ಇದೇ ಸಂದರ್ಭದಲ್ಲಿ ಶ್ರೀಕಾಂತ್.ವಿ ಅವರಿಗೆ ಪ್ರಶಂಸೆ ಪತ್ರ ನೀಡಿ ಅಭಿನಂದಿಸಿದರು ಸಭೆಯಲ್ಲಿ ಉತ್ತರ ವಿಭಾಗದ ಡಿಸಿಪಿಗಳಾದ ಸೈದುಲು ಅಡಾವತ್ ಹಾಗೂ ಸಿರಿ ಗೌರಿ ಅವರಿದ್ದರು.