ನಕಲಿ ಮದ್ಯ ಸೇವನೆ ಮೃತರ ಸಂಖ್ಯೆ ೨೧
ಸಂಗ್ರೂರ,ಮಾ.೨೩- ಪಂಜಾಬ್‌ನಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ ೨೧ಕ್ಕೆ ಏರಿಕೆಯಾಗಿದೆ. ಸಂಗ್ರೂರಿನಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ತನಿಖೆ ನಡೆಸಲು ಪಂಜಾಬ್ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಸಂಗ್ರೂರ್ ಮುಖ್ಯ ವೈದ್ಯಾಧಿಕಾರಿ ಪ್ರಕಾರ, ಎಥೆನಾಲ್ ಮಿಶ್ರಿತ ನಕಲಿ ಮದ್ಯ ಸೇವಿಸಿ ಇದುವರೆಗೆ ೪೦ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ನಕಲಿ ಮದ್ಯ ಸೇವಿಸಿ ನಾಲ್ವರು ಸಾವನ್ನಪ್ಪಿದ್ದಾರೆ. ಹಲವು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಇನ್ನೂ ನಾಲ್ವರು ಪಾಟಿಯಾದ ರಾಜೀಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದರು. ಶುಕ್ರವಾರ ಮತ್ತೆ ೮ ಜನ ಸಾವನ್ನಪ್ಪಿದ್ದಾರೆ. ಇಂದು ಅಂದರೆ ಶನಿವಾರ ೫ ಮಂದಿ ಸಾವನ್ನಪ್ಪಿದ್ದಾರೆ.ಈ ಮೂಲಕ ಒಟ್ಟು ಸಾವಿನ ಸಂಖ್ಯೆ ೨೧ಕ್ಕೆ ಏರಿಕೆಯಾಗಿದೆ.
ಈ ಪ್ರಕರಣದಲ್ಲಿ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ. ಮನೆಯೊಂದರಲ್ಲಿ ವಿಷಪೂರಿತ ಮದ್ಯ ತಯಾರಿಸಿ ಸಿಕ್ಕಿಬಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿ ೨೦೦ ಲೀಟರ್ ಎಥೆನಾಲ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ಡಿಐಜಿ ಹರ್ಚರಣ್ ಸಿಂಗ್ ಭುಲ್ಲಾರ್ ಶುಕ್ರವಾರ ಹೇಳಿದ್ದಾರೆ.