ಭೂತಾನ್‌ನಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ಲೋಕಾರ್ಪಣೆ
ತಿಂಪು,ಮಾ.೨೩:ಭೂತಾನ್‌ನಲ್ಲಿ ಭಾರತದ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಲೋಕಾರ್ಪಣೆ ಮಾಡಿದರು. ತಾಯಿ ಮತ್ತು ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದೆ. ಲೋಕಾರ್ಪಣೆಗೊಳಿಸಿದ ನಂತರ ಪ್ರಧಾನಿಯವರು ಆಸ್ಪತ್ರೆಯ ಒಳಗಡೆ ಪ್ರವೇಶಿಸಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಭೂತಾನ್ ರಾಜ ಜಿಗ್ಮಿಕೇಸರ್, ಭೂತಾನ್ ಪ್ರಧಾನಿ ಶೆರಿಂಗ್ ಟೊಬ್‌ಗೆ ಉಪಸ್ಥಿತರಿದ್ದರು. ಈ ಮೂಲಕ ಪ್ರಧಾನಿಯವರ ೨ ದಿನಗಳ ಭೂತಾನ್ ಪ್ರವಾಸ ಮುಕ್ತಾಯಗೊಂಡಿದ್ದು, ಭಾರತಕ್ಕೆ ಪ್ರಯಾಣ ಬೆಳೆಸಿದರು.
ಭೇಟಿಯ ವೇಳೆ ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ, ಕೃಷಿ, ಸಹಕಾರ ಸೇರಿದಂತೆ ಹಲವು ಒಪ್ಪಂದಗಳಿಗೆ ಪ್ರಧಾನಿಯವರು ಅಂಕಿತ ಹಾಕಿದ್ದಾರೆ. ಇದೇ ವೇಳೆ ಎರಡೂ ರಾಷ್ಟ್ರಗಳ ನಡುವೆ ರೈಲು ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆ. ನಿನ್ನೆ ಪ್ರಧಾನಿಯವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ’ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೊ ನೀಡಿ ಗೌರವಿಸಿದೆ.ಇಂದು ಬೆಳಿಗ್ಗೆ ತಿಂಪುವಿನಿಂದ ಪ್ರಯಾಣ ಬೆಳೆಸಿದ ಮೋದಿ ಅವರಿಗೆ ಭೂತಾನ್ ಸರ್ಕಾರದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಮೋದಿ ಅವರು ಭೂತಾನ್ ಭೇಟಿಯ ಕ್ಷಣಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಭೂತಾನ್ ಭಾಷೆಯಲ್ಲೇ ಟ್ವೀಟ್ ಮಾಡಿದ್ದಾರೆ.