ನಾಟೀಕಾರ ಆರೋಗ್ಯದಲ್ಲಿ ಏರುಪೇರು: ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲು

ಅಫಜಲಪುರ: ಭೀಮಾ ನದಿಗೆ 5 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿ ಕಳೆದ 8 ದಿನಗಳಿಂದ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಂಡ ಶಿವಕುಮಾರ ನಾಟೀಕಾರ ಅವರ ಆರೋಗ್ಯದಲ್ಲಿ ಏರುಪಾರಾರಿ ತೀವ್ರ ಅಸ್ವಸ್ಥತೆ ಕಂಡು ಬಂದ ಹಿನ್ನೆಲೆ ಶುಕ್ರವಾರ ಮಧ್ಯಾಹ್ನ ವಿಜಯಪುರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಕುರಿತು ಹೋರಾಟ ಸಮಿತಿಯ ಮುಖ್ಯಸ್ಥರು ಮಾತನಾಡಿ, ಕಳೆದ 8 ದಿನಗಳಿಂದ ಭೀಮಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಶಿವಕುಮಾರ ನಾಟೀಕಾರ ಅವರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ಮಾಡಿದ್ದಾರೆ ಹೊರತು ಉಜನಿ ಜಲಾಶಯವಾಗಲಿ ಅಥವಾ ಇನ್ನಾವುದೇ ಆಣೆಕಟ್ಟಿನಿಂದ ನೀರು ಹರಿಸುವ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಜಿಲ್ಲಾಧಿಕಾರಿಗಳಾಗಲಿ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಸ್ಥಳಕ್ಕೆ ಬಂದು ಭೇಟಿ ನೀಡಿಲ್ಲ. ಹೀಗಾಗಿ ಶಿವಕುಮಾರ ನಾಟೀಕಾರ ಅವರ ಆರೋಗ್ಯಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ ನೇರವಾಗಿ ಜಿಲ್ಲಾಡಳಿತ ಹಾಗೂ ಸರ್ಕಾರವೇ ಹೊಣೆ ಎಂದು ಆರೋಪ ಎಸಗಿದ್ದಾರೆ.
ಅಲ್ಲದೆ ನಾಳೆ ಶನಿವಾರ ಸಂಜೆ ಒಳಗಾಗಿ ಭೀಮಾ ನದಿಗೆ ನೀರು ಹರಿಸದಿದ್ದರೆ ಹೋರಾಟವನ್ನು ಮತ್ತಷ್ಟು ಉಗ್ರವಾಗಿ ಹಮ್ಮಿಕೊಳ್ಳುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಘಟನೆ ಹಿನ್ನೆಲೆ ಆಕ್ರೋಶಗೊಂಡ ಹೋರಾಟಗಾರರು ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ಈ ವೇಳೆ ತಹಸೀಲ್ದಾರ ಸಂಜೀವಕುಮಾರ ದಾಸರ ಹಾಗೂ ಸಿಪಿಐ ಚನ್ನಯ್ಯ ಹಿರೇಮಠ ಅವರು ಹೋರಾಟಗಾರರ ಮನವೊಲಿಸಿದ ನಂತರ ರಸ್ತೆ ತಡೆ ಹಿಂಪಡೆದರು.