ಅಲ್ಲಾಡುತ್ತಿರುವ ಕುರ್ಚಿ ಉಳಿಸಿಕೊಳ್ಳಲು ಖರ್ಗೆ ಓಲೈಕೆಗಾಗಿ ಸಚಿವ ಸಂಪುಟ ಸಭೆ ನಾಟಕ: ವಿಜಯೇಂದ್ರ
ಕಲಬುರಗಿ:ಸೆ.18: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಕುರ್ಚಿ ಅಲ್ಲಾಡುತ್ತಿರುವ ಸಂದರ್ಭದಲ್ಲಿ ಕುರ್ಚಿ ಉಳಿಸಿಕೊಳ್ಳಲು ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎಐಸಿಸಿ) ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆಯವರಿಗೆ ಓಲೈಸಲು ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆಯ ನಾಟಕ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಿನ್ನೆ ಆಗಿರುವ ಸಚಿವ ಸಂಪುಟ ಸಭೆಯಿಂದ ಈ ಭಾಗದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಈ ಭಾಗಕ್ಕೆ 5 ಸಾವಿರ ಕೋಟಿ ರೂ.ಗಳನ್ನು ಕೊಡುತ್ತೇವೆ; ಇಲ್ಲಿ ಶಾಲಾ ಕಾಲೇಜು ಮಾಡುತ್ತೇವೆ. 1,100 ಕೋಟಿ ರೂ.ಗಳ ಪ್ಯಾಕೇಜ್ ಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ಟೀಕಿಸಿದರು.
ಕಳೆದ ಒಂದು ವರ್ಷದ ಹಿಂದೆ ಕೂಡ ಇದೇ ಮಾತುಗಳನ್ನು ಹೇಳಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಕ್ಷೇಪಿಸಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಹಿಂದೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 1,500 ಕೋಟಿ ಕೊಟ್ಟಿದ್ದರು. ತದನಂತರ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾದ ಮೇಲೆ ಬಿಜೆಪಿ ಸರ್ಕಾರವು 3 ಸಾವಿರ ಕೋಟಿ ಮತ್ತು ಬಜೆಟ್‍ನಲ್ಲಿ 5 ಸಾವಿರ ಕೋಟಿ ರೂ.ಗಳ ಅನುದಾನ ಪ್ರಕಟಿಸಿತ್ತು. ಅದನ್ನೇ ಸಿದ್ಧರಾಮಯ್ಯನವರು ನಿನ್ನೆ ಪುನರುಚ್ಚಾರ ಮಾಡಿದ್ದಾರೆಯೇ ಹೊರತು, ಯಾವುದೇ ಹೊಸ ವಿಚಾರಗಳನ್ನು ಹೇಳಿಲ್ಲ ಎಂದು ಕಟುವಾಗಿ ಟೀಕಿಸಿದರು.
ಮುಖ್ಯಮಂತ್ರಿಗಳು ರಾಜ್ಯಕ್ಕೆ ಮುಖ್ಯಮಂತ್ರಿಯೇ ಅಥವಾ ಕೇವಲ ಬೆಂಗಳೂರು, ಮೈಸೂರಿನ ಮುಖ್ಯಮಂತ್ರಿ ಆಗಿದ್ದಾರೆಯೇ ಎಂದು ಜನರು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅಥವಾ ಯಾವುದೇ ಸಚಿವರು ಇವತ್ತು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರವಾಸ ಮಾಡುತ್ತಿಲ್ಲ. ಏನು ಅಭಿವೃದ್ಧಿ ಆಗಬೇಕೆಂದು ಚಿಂತನೆ ಮಾಡುತ್ತಿಲ್ಲ; ಅನುದಾನವನ್ನೂ ಕೊಡುತ್ತಿಲ್ಲ. ಕೇವಲ ಚುನಾವಣೆ ಬಂದಾಗ ಭಾಷಣ ಮಾಡುವುದಕ್ಕಷ್ಟೇ ಸೀಮಿತರಾಗಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಕಳೆದ ಐವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಆಳ್ವಿಕೆ ಮಾಡಿದೆ. ಕಲ್ಯಾಣ ಕರ್ನಾಟಕ ಭಾಗವು ಇನ್ನೂ ಹಿಂದುಳಿದಿದೆ. ಅಂದರೆ ಅದಕ್ಕೆ ಕಾಂಗ್ರೆಸ್ಸೇ ಕಾರಣ ಎಂದು ದೂಷಿಸಿದ ಅವರು, ಮೋದಿ ಸರ್ಕಾರವು ಶೀಘ್ರ ಪತನಗೊಳ್ಳಲಿದೆ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆಯು ಮೂರ್ಖತನದ ಪರಮಾವಧಿ ಎಂದು ಹರಿಹಾಯ್ದರು.
ಮನೆಮುರುಕರಿದ್ದಾರೆ ಎಂದು ಸಿದ್ಧರಾಮಯ್ಯನವರ ಹೇಳಿಕೆಯ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಯಾರಿಗೂ ಹೇಳಲು ಹೋಗದಿರಿ; ಅದು ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಹೇಳಿದ್ದಾರೆ. ಎಲ್ಲೂ ಮಾತನಾಡಲು ಹೋಗದಿರಿ ಎಂದು ತಿಳಿಸಿದರು.
ಕುರ್ಚಿ ಅಲ್ಲಾಡಿಸುವ ಕೆಲಸ ನಡೆಯುತ್ತಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಕುರಿತು ಗಮನ ಸೆಳೆದಾಗ, ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಯಾರ್ಯಾರು ನಾನೂ ಮುಖ್ಯಮಂತ್ರಿ ಆಕಾಂಕ್ಷಿ, ನಾನೂ ಸೀನಿಯರ್, ನಾನೂ ಜೂನಿಯರ್ ಇದ್ದೇನೆ ಎಂದು ಹೇಳಿಕೆ ಕೊಡುತ್ತಿದ್ದಾರೋ ಅವರಿಗೆ ತಾವು ಈ ಪ್ರಶ್ನೆ ಕೇಳಿ ಎಂದು ಅವರು ಹೇಳಿದರು.