ಡಿ.೫ ರಂದು ಹಾಜರಾತಿಗೆ ಕಂಗನಾಗೆ ಚಂಡೀಗಢ ಕೋರ್ಟ್ ನೋಟಿಸ್
ಚಂಡೀಗಢ,ಸೆ.೧೮-ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರಿಗೆ ಸದ್ಯಕ್ಕೆ ಎಮರ್ಜೆನ್ಸಿ ಚಿತ್ರದಿಂದಾಗಿ ತೊಂದರೆ ತಪ್ಪುವ ಹಾಗೆ ಕಾಣುತ್ತಿಲ್ಲ. ಏಕೆಂದರೆ ಚಂಡೀಗಢ ಜಿಲ್ಲಾ ನ್ಯಾಯಾಲಯಕ್ಕೆ ಕಂಗನಾ ರಣಾವತ್ ಹಾಜರಾಗುವಂತೆ ಆದೇಶ ಹೊರಡಿಸಲಾಗಿದೆ. ಕಂಗನಾ ರಣಾವತ್ ಅವರ ಹೊಸ ಚಿತ್ರ ಎಮರ್ಜೆನ್ಸಿ ವಿರುದ್ಧ ಸಲ್ಲಿಸಲಾದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ನೋಟಿಸ್ ನೀಡಿದೆ. ನೋಟಿಸ್‌ನಲ್ಲಿ ಕಂಗನಾಗೆ ಡಿಸೆಂಬರ್ ೫ ರಂದು ಹಾಜರಾಗುವಂತೆ ಸೂಚಿಸಲಾಗಿದೆ.
ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚಂಡೀಗಢದ ಎಸ್‌ಎಸ್‌ಪಿ ಅವರಿಗೆ ಸೂಚನೆ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ರವೀಂದರ್ ಸಿಂಗ್ ಬಸ್ಸಿ ಅವರು ಕಂಗನಾ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಕಂಗನಾ ರಣಾವತ್ ಅವರ ಹೊಸ ಚಿತ್ರ ಎಮರ್ಜೆನ್ಸಿ ಸೆಪ್ಟೆಂಬರ್ ೬ ರಂದು ಬಿಡುಗಡೆಯಾಗಬೇಕಿತ್ತು, ಆದರೆ ಚಿತ್ರವನ್ನು ತಡೆಹಿಡಿಯಲಾಗಿದೆ .ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜೀವನಾಧಾರಿತ ಚಿತ್ರ. ಇದರ ಟ್ರೇಲರ್ ಕೂಡ ಬಿಡುಗಡೆಯಾಗಿದೆ.
ಈ ಚಿತ್ರದ ಮೂಲಕ ಕಂಗನಾ ಸಿಖ್ಖರ ಹೆಸರು ಕೆಡಿಸಲು ಯತ್ನಿಸಿದ್ದಾರೆ ಎಂದು ವಕೀಲ ರವೀಂದರ್ ಸಿಂಗ್ ಬಸ್ಸಿ ಹೇಳಿದ್ದಾರೆ. ಇತಿಹಾಸವನ್ನು ಓದದೆ, ಕಂಗನಾ ಸಿಖ್ಖರ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ತೋರಿಸಿದ್ದಾರೆ ಮತ್ತು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಕಂಗನಾ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಕಂಗನಾ ರಣಾವತ್ ಜೊತೆಗೆ ಸ್ಕ್ರೀನ್ ಪ್ಲೇ ರೈಟರ್ ರಿತೇಶ್ ಶಾ ಮತ್ತು ಝೀ ಸ್ಟುಡಿಯೋ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಈ ಮಧ್ಯೆ, ಮೊಹಾಲಿಯ ಇಬ್ಬರು ವ್ಯಕ್ತಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು,
ಮೊಹಾಲಿ ನಿವಾಸಿಗಳಾದ ಗುರಿಂದರ್ ಸಿಂಗ್ ಮತ್ತು ಗುರ್ಮೋಹನ್ ಸಿಂಗ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಎಮರ್ಜೆನ್ಸಿ ಚಿತ್ರದ ಬಿಡುಗಡೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಚಿತ್ರದಲ್ಲಿ ಸಿಖ್ಖರನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಅರ್ಜಿಯಲ್ಲಿ ಇಬ್ಬರೂ ಹೇಳಿಕೆ ನೀಡಿದ್ದಾರೆ. ಈ ರೀತಿ ಚಿತ್ರ ಬಿಡುಗಡೆಯಾದರೆ ಸಿಖ್ಖರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಸಿಖ್ಖರ ಹೆಸರು ಕೆಡಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಸಿನಿಮಾ ಮಾಡಲಾಗಿದೆ. ಚಿತ್ರ ಬಿಡುಗಡೆಗೂ ಮುನ್ನ ತಜ್ಞರ ಸಮಿತಿ ರಚಿಸಬೇಕು, ಅದರಲ್ಲಿ ಎಸ್ ಜಿಪಿಸಿ ಸದಸ್ಯರನ್ನು ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಅವರಿಗೆ ಚಿತ್ರ ತೋರಿಸಬೇಕು ಮತ್ತು ವಿವಾದಾತ್ಮಕ ದೃಶ್ಯಗಳನ್ನು ಚಿತ್ರದಿಂದ ಕಡಿತಗೊಳಿಸಬೇಕು. ಅದರ ನಂತರವೇ ಅವರನ್ನು ಬಿಡುಗಡೆ ಮಾಡಬೇಕು ಎಂಬುದು ಅವರ ಆಗ್ರಹವಾಗಿದೆ.