ತೇಜಸ್ ವಿಮಾನ ಹಾರಿಸಿದ ಮೊದಲ ಮಹಿಳೆ ಮೋಹನಾ
ನವದೆಹಲಿ,ಸೆ.೧೮-ಭಾರತೀಯ ವಾಯುಪಡೆಯು ವಿಶ್ವದ ೪ ನೇ ಅತ್ಯಂತ ಶಕ್ತಿಶಾಲಿ ವಾಯುಪಡೆಯಾಗಿದೆ. ಸದ್ಯ೨೦ ಮಹಿಳಾ ಫೈಟರ್ ಪೈಲಟ್‌ಗಳಿದ್ದಾರೆ.
ಅದರಲ್ಲಿ ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರಾದ ಸ್ಕ್ವಾಡ್ರನ್ ಲೀಡರ್
ಮೋಹನಾ ಸಿಂಗ್ ಅವರು ಭಾರತೀಯ ನಿರ್ಮಿತ ತೇಜಸ್ ಯುದ್ಧ ವಿಮಾನವನ್ನು ಹಾರಿಸಿದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಮೋಹನ ಸಿಂಗ್, ಎಲ್ಸಿಎ ತೇಜಸ್ ವಿಮಾನವನ್ನು ಹಾರಿಸಿದ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.ಅವರು ಜೋಧ್‌ಪುರದಲ್ಲಿ ಇತ್ತೀಚೆಗೆ ನಡೆದ ತರಂಗ್ ಶಕ್ತಿ ವ್ಯಾಯಾಮದ ಭಾಗವಾಗಿದ್ದಾರೆ. ಅಲ್ಲದೆ, ಅವರು ತ್ರಿಸೇನೆಯ ಮೂವರು ಉಪ ಮುಖ್ಯಸ್ಥರೊಂದಿಗೆ ಸೇವೆ ಸಲ್ಲಿಸಿದ್ದಾರೆ.ಸರಿಸುಮಾರು ಎಂಟು ವರ್ಷಗಳ ಹಿಂದೆ ಫೈಟರ್ ಸ್ಕ್ವಾಡ್ರನ್‌ಗೆ ಸೇರ್ಪಡೆಗೊಂಡ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿದ್ದಾರೆ.
ಮೋಹನ, ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್ ಮತ್ತು ಸ್ಕ್ವಾಡ್ರನ್ ಲೀಡರ್ ಅವನಿ ಚತುರ್ವೇದಿ ಅವರೊಂದಿಗೆ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್‌ಗಳಾಗಿ ನೇಮಕಗೊಂಡ ಮೊದಲ ಮಹಿಳೆಯರ ಗುಂಪಿನ ಸದಸ್ಯರಾಗಿದ್ದಾರೆ.
ಈ ಮೂವರು ಪೈಲಟ್‌ಗಳು ಈಗ ಸು-೩೦ ಎಂಕೆಐ ಯುದ್ಧ ವಿಮಾನವನ್ನು ಪಶ್ಚಿಮ ಮರುಭೂಮಿಯ ಮೇಲೆ ಹಾರಿಸುತ್ತಿದ್ದಾರೆ, ಇದು ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಗಿದೆ.
ಮೋಹನ ಸಿಂಗ್ ಅವರ ಈ ಸಾಧನೆಯು ಭಾರತೀಯ ವಾಯುಪಡೆಯಲ್ಲಿ ಮಹಿಳೆಯರಿಗೆ ಹೊಸ ಬಾಗಿಲುಗಳನ್ನು ತೆರೆದಿದೆ. ಅದರಂತೆ ವಾಯುಸೇನೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡುತ್ತಿದೆ. ಕಳೆದ ವರ್ಷ ಡಿಸೆಂಬರ್ ೨ ರಂದು ವಾಯುಪಡೆಯ ೧೫೩ ಅಗ್ನಿವೀರ್ ವಾಯು (ಮಹಿಳಾ) ಅಧಿಕಾರಿಗಳನ್ನು ಸೇರ್ಪಡೆಗೊಳಿಸಲಾಗಿದೆ.
೨೦೧೬ ರಲ್ಲಿ, ಸರ್ಕಾರವು ಮಹಿಳೆಯರಿಗೆ ಫೈಟರ್ ಪೈಲಟ್‌ಗಳಾಗಲು ದಾರಿ ಮಾಡಿಕೊಟ್ಟಿದೆ .ನಂತರ ಮಹಿಳಾ ಪೈಲಟ್‌ಗಳು ಭಾರತೀಯ ವಾಯುಪಡೆಯಲ್ಲಿ ತಮ್ಮ ಸ್ಥಾನವನ್ನು ಪಡೆದಿದ್ದಾರೆ ಮತ್ತು ದೇಶದ ರಕ್ಷಣೆಯಲ್ಲಿ ಹೊಸ ಆಯಾಮಗಳನ್ನು ಸ್ಥಾಪಿಸಿದ್ದಾರೆ.