೪೬೪ ದಶಲಕ್ಷ ಡಾಲರ್ ಬಾಂಡ್ ಪಡೆಯಲು ಟ್ರಂಪ್ ವಿಫಲ
ವಾಷಿಂಗ್ಟನ್, ಮಾ.೧೯- ನ್ಯೂಯಾರ್ಕ್ ಸಿವಿಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ೪೬೪ ದಶಲಕ್ಷ ಡಾಲರ್ (ಸುಮಾರು ೩೮೦೦ ಕೋ.ರೂ.) ಮೊತ್ತವನ್ನು ಖಾತರಿ ನೀಡುವಂಥ ಖಾಸಗಿ ಕಂಪೆನಿಯನ್ನು ಹುಡುಕುವಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಫಲತೆ ಕಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಂಪ್ ತನ್ನ ಮನವಿಯನ್ನು ಮುಂದುವರೆಸುವ ಸಲುವಾಗಿ ಪೂರ್ಣ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಬೇಕು ಅಥವಾ ಬಾಂಡ್ ಅನ್ನು ಪಡೆದುಕೊಳ್ಳಬೇಕು. ಆದರೆ ಬೃಹತ್ ಮೊತ್ತದ ಖಾತರಿ ನೀಡಲು ಯಾವುದೇ ಕಂಪನಿಗಳು ಮುಂದೆ ಬಾರದಿರುವುದು ಸಹಜವಾಗಿಯೇ ಟ್ರಂಪ್‌ಗೆ ಹಿನ್ನಡೆ ತಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಇಷ್ಟು ದೊಡ್ಡ ಮೊತ್ತದ ಬಾಂಡ್ ಪಡೆದುಕೊಳ್ಳುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಅಷ್ಟು ದೊಡ್ಡ ಮೊತ್ತದ ಬಾಂಡ್ ಖಾತರಿ ನೀಡಲು ನನ್ನಂಥ ಯಶಸ್ವಿ ಕಂಪೆನಿಗಳಿಂದಲೂ ಸಾಧ್ಯವಿಲ್ಲ. ಅಲ್ಲದೆ ಇಷ್ಟು ದೊಡ್ಡ ಮೊತ್ತದ ಬಾಂಡ್ ಅನ್ನು ಯಾವುದೇ ಕಂಪನಿಗಳು ಇದಕ್ಕೂ ಮುಂಚೆ ಕೇಳಿರಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ಬಾಂಡ್ ಖಾತರಿಪಡಿಸುವ ನಿಟ್ಟಿನಲ್ಲಿ ನಮ್ಮ ತಂಡವು ಪ್ರಪಂಚದ ಅತಿದೊಡ್ಡ ವಿಮಾ ಕಂಪನಿಗಳೊಂದಿಗೆ ಮಾತುಕತೆ ನಡೆಸಲು ಲೆಕ್ಕವಿಲ್ಲದಷ್ಟು ಗಂಟೆಗಳ ಕಾಲ ಕಳೆದಿದೆ. ಕೆಲವೇ ಕೆಲವು ಕಂಪನಿಗಳು ಮಾತ್ರ ಅಷ್ಟು ದೊಡ್ಡ ಮೊತ್ತದ ಬಾಂಡ್ ಬಗ್ಗೆ ಪರಿಗಣಿಸಬಹುದು ಎಂದು ಟ್ರಂಪ್ ಅವರ ವಕೀಲರು ನ್ಯಾಯಾಲಯದ ಫೈಲಿಂಗ್‌ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಒಂದು ವೇಳೆ ಅಷ್ಟು ದೊಡ್ಡ ಮೊತ್ತ ಅಥವಾ ಬಾಂಡ್ ನೀಡಲು ವಿಫಲರಾದರೆ ಟ್ರಂಪ್ ತಮ್ಮ ಕೆಲವು ರಿಯಲ್ ಎಸ್ಟೇಟ್ ಸ್ವತ್ತುಗಳು ದಿವಾಳಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಒಂದು ವೇಳೆ ತಮ್ಮ ಮನವಿಯನ್ನು ಕಳೆದುಕೊಂಡರೆ ಮತ್ತು ಅದನ್ನು ಸ್ವತಹ ಮಾಡಲು ಸಾಧ್ಯವಾಗದಿದ್ದರೆ ಕಂಪನಿಗಳು ಅಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಇಷ್ಟು ದೊಡ್ಡ ಮೊತ್ತಕ್ಕೆ ಖಾತ್ರಿ ನೀಡಲು ಯಾವುದೇ ಕಂಪನಿಗಳು ಮುಂದೆ ಬಂದಿಲ್ಲ ಎನ್ನಲಾಗಿದೆ.