ಮಹಿಳೆಯರಿಂದ ಎಲ್ಲ ಕೇತ್ರಗಳಲ್ಲಿ ಸಾಧನೆ
ಕೆಂಗೇರಿ,ಮಾ.೨೦:ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಎಂದು ಕರುನಾಡು ವಿಜಯಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಆರ್. ಎಸ್. ಮಹೇಶ್ ತಿಳಿಸಿದರು.
ಕರುನಾಡ ವಿಜಯ ಸೇನೆಯ ರಾಜ್ಯಾಧ್ಯಕ್ಷರಾದ ದೀಪಕ್ ರವರ ಸಹಕಾರದೊಂದಿಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಕರುನಾಡ ವಿಜಯಸೇನೆ ವತಿಯಿಂದ ಕೆಂಗೇರಿ ಉಪನಗರದ ಗಣೇಶ ಆಟದ ಮೈದಾನದಲ್ಲಿ ಮಹಿಳಾ ದಿನಾಚರಣೆ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರವರ ಜನ್ಮ ದಿನಾಚರಣೆ ಹಾಗೂ ಶ್ರೀ ಬಂಡೆ ಮಹಾಕಾಳಿ ಅಮ್ಮನವರ ಉತ್ಸವವನ್ನು ಹಮ್ಮಿಕೊಂಡಿದ್ದರು. ಯಶವಂತಪುರ ಕ್ಷೇತ್ರದ ವಿಜಯಸೇನೆಯ ಅಧ್ಯಕ್ಷ ರಾಘವೇಂದ್ರ ಎಂ. ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯ, ಜನಾಂಗೀಯ, ಭಾಷಿಕ, ಸಾಂಸ್ಕೃತಿಕ, ಆರ್ಥಿಕ ಅಥವಾ ರಾಜಕೀಯ ಎಂಬ ವಿಭಜನೆಯನ್ನು ಲೆಕ್ಕಿಸದೆ ಮಹಿಳೆಯರು ತಮ್ಮ ಸಾಧನೆಗಳಿಗಾಗಿ ಗುರುತಿಸಲ್ಪಡುವ ದಿನ ಎಂದು ಹೇಳಿದರು.
ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಆರ್. ಮಾತನಾಡಿ ಮಹಿಳೆಯರ ಸಾಧನೆಯ ಇತಿಹಾಸ, ಸಮಕಾಲೀನ ಸಮಾಜಕ್ಕೆ ಮಹಿಳೆಯರ ಕೊಡುಗೆ ಈ ವಿಷಯಗಳಿಗೆ ಸಂಬಂಧಿಸಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಆರ್ಥಿಕ, ತಂತ್ರಜ್ಞಾನ ಈ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಬಹುಮಾನ ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದರು, ವಿಜಯ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್, ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಆರ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ತಾರಾ, ಹಾಗೂ ಯಶವಂತಪುರ ಕ್ಷೇತ್ರದ ವಿಜಯಸೇನೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.