ಹಮಾಸ್ ಉಪ ಮಿಲಿಟರಿಕಮಾಂಡರ್ ಇಸ್ಸಾ ಹತ್ಯೆ
ನ್ಯೂಯಾರ್ಕ್, ಮಾ.೧೯- ಒಂದೆಡೆ ಗಾಝಾದಲ್ಲಿ ತೀವ್ರ ರೀತಿಯಲ್ಲಿ ಆಹಾರದ ಕೊರತೆ ಉಂಟಾಗಿದ್ದರೆ ಮತ್ತೊಂದೆಡೆ ಇಸ್ರೇಲ್ ತನ್ನ ದಾಳಿಯನ್ನು ಮುಂದುವರೆಸಿದೆ. ಈ ನಡುವೆ ಹಮಾಸ್ ಉಗ್ರಸಂಘಟನೆಯ ಉಪ ಮಿಲಿಟರಿ ಕಮಾಂಡರ್ ಮರ್ವಾನ್ ಇಸ್ಸಾ ಎಂಬಾತ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟಿರುವ ಸಂಗತಿಯನ್ನು ಶ್ವೇತಭವನದ ಅಧಿಕಾರಿ ಜೇಕ್ ಸುಲ್ಲಿವಾನ್ ಬಹಿರಂಗಪಡಿಸಿದ್ದಾರೆ.
ಕಳೆದ ಅಕ್ಟೋಬರ್ ೭ರ ಬಳಿಕ ಆರಂಭವಾದ ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನದ ಬಳಿಕ ಮರ್ವಾನ್ ಇಸ್ಸಾ, ಹತನಾದ ಉಗ್ರ ಸಂಘಟನೆಯ ಹಿರಿಯ ನಾಯಕನಾಗಿದ್ದಾನೆ. ಇನ್ನು ಗಾಝಾವನ್ನು ನಿಯಂತ್ರಿಸುವ ಪ್ಯಾಲೇಸ್ಟಿನಿಯನ್ ಗುಂಪು, ಇಸ್ಸಾ ಸಾವಿನ ಬಗ್ಗೆ ಯಾವುದೇ ವರದಿ ಪ್ರಕಟಿಸಿಲ್ಲ. ಈಗಾಗಲೇ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಯುದ್ಧದ ನಿರ್ದೇಶನದ ಬಗ್ಗೆ ಹೆಚ್ಚಿನ ಮಾತುಕತೆ ನಡೆಸಿದರು. ಅಲ್ಲದೆ ಒಂದು ವಾರದ ಹಿಂದೆ ಸೆಂಟ್ರಲ್ ಗಾಝಾದ ನುಸಿರಾತ್ ನಿರಾಶ್ರಿತರ ಶಿಬಿರದ ಅಡಿಯಲ್ಲಿ ಸುರಂಗ ಸಂಕೀರ್ಣವನ್ನು ಗುರಿಯಾಗಿಸಿಕೊಂಡು ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಸಾ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲಿ ಮಾಧ್ಯಮ ಮೂಲಗಳು ವರದಿ ಮಾಡಿವೆ. ಇಸ್ಸಾನನ್ನು ಹಮಾಸ್‌ನ ಮಿಲಿಟರಿ ವಿಭಾಗ ಇಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್‌ನ ಉಪ ಕಮಾಂಡರ್ ಆಗಿದ್ದು, ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿದ್ದ. ಅಲ್ಲದೆ ಇಸ್ಸಾನನ್ನು ಭಯೋತ್ಪಾದಕರ ಕಪ್ಪು ಪಟ್ಟಿಗೆ ಸೇರಿಸಿದ್ದ ಯುರೋಪಿಯನ್ ಯೂನಿಯನ್, ಈತ ಅಕ್ಟೋಬರ್ ೭ರ ಇಸ್ರೇಲ್ ಮೇಲಿನ ಭೀಕರ ದಾಳಿಯಲ್ಲಿ ಮುಖ್ಯ ಪಾತ್ರ ಹೊಂದಿದ್ದ ಎಂದು ನೇರವಾಗಿ ತಿಳಿಸಿದೆ. ಗಾಝಾ ಮೇಲೆ ದಾಳಿ ಆರಂಭಿಸಿದ ಬಳಿಕ ಹಮಸ್ ಉಗ್ರ ಸಂಘಟನೆಯ ಹಲವು ನಾಯಕರನ್ನು ಇಸ್ರೇಲ್ ಹತ್ಯೆ ನಡೆಸಿದೆ.