ಮೇಘನಾ ಫುಡ್ಸ್ ಕಚೇರಿ ಮೇಲೆ ಐಟಿ ದಾಳಿ
ಬೆಂಗಳೂರು,ಮಾ.೧೯- ತೆರಿಗೆ ವಂಚನೆಯ ಮಾಹಿತಿಯ ಹಿನ್ನಲೆಯಲ್ಲಿ ನಗರದ ಮೇಘನಾ ಫುಡ್ಸ್ ಗ್ರೂಪ್ ರೆಸ್ಟೋರೆಂಟ್‌ಗಳು ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಮೇಘನಾ ಫುಡ್ಸ್ ಗ್ರೂಪ್ ನಡೆಸುತ್ತಿರುವ ರೆಸ್ಟೋರೆಂಟ್‌ಗಳು ಹಾಗೂ ಕಚೇರಿಗಳ ಏಕಕಾಲಕ್ಕೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಖಲೆ ಪತ್ರಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಕೋರಮಂಗಲದಲ್ಲಿರುವ ಕಚೇರಿ, ಇಂದಿರಾನಗರ, ಜಯನಗರ ಮತ್ತಿತರ ಕಡೆಗಳಲ್ಲಿ ಇರುವ ರೆಸ್ಟೋರೆಂಟ್‌ಗಳು ಸೇರಿ ಹಲವೆಡೆ ದಾಳಿ ನಡೆಸಲಾಗಿದೆ.
ಮೇಘನಾ ಫುಡ್ಸ್ ಹೆಸರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿರುವ ಕಂಪನಿಯು ನಗರದಲ್ಲಿ ಒಂಬತ್ತು ಔಟ್‌ಲೆಟ್‌ಗಳನ್ನು ಹೊಂದಿದೆ. ಹೈದರಾಬಾದ್ ಮೂಲದ ಕಂಪನಿ ಸ್ಥಾಪಕರು ೨೦೦೬ರಿಂದ ನಗರದಲ್ಲಿ ಶಾಖೆಗಳನ್ನು ತೆರೆದಿದ್ದಾರೆ. ಕಂಪನಿಯ ಆದಾಯ ತೆರಿಗೆ ಪಾವತಿಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಬೆಳಗ್ಗೆ ಐದು ಘಂಟೆಯಿಂದ ಕರ್ನಾಟಕ ಮತ್ತು ಗೋವಾ ವಿಭಾಗದ ಐಟಿ ಅಧಿಕಾರಿಗಳ ಹಲವು ತಂಡಗಳು ನಗರದಲ್ಲಿ ಸುಮಾರು ಹತ್ತಕ್ಕೂ ಹಚ್ಚು ಕಡೆಗಳಲ್ಲಿ ದಾಳಿ ನಡೆಸಿವೆ.