೨೦೨೬ಕ್ಕೆ ಮಾರಕ ಡೆಂಗ್ಯೂಗೆ ಲಸಿಕೆ
ಚಿನೈ,ಮಾ.೧೯-ಸೊಳ್ಳೆಗಳಿಂದ ಹರಡುವ ಗಂಭೀರ ಕಾಯಿಲೆಯಾದ ಡೆಂಗ್ಯೂವನ್ನು ಎದುರಿಸಲು ದೇಶಕ್ಕೆ ಒಂದು ಪರಿಹಾರ ದೊರೆಯಲಿದೆ. ಔಷಧ ತಯಾರಿಕಾ ಕಂಪನಿ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ೨೦೨೬ ರ ಆರಂಭದಲ್ಲಿ ವಾಣಿಜ್ಯ ಬಳಕೆಗಾಗಿ ಡೆಂಗ್ಯೂ ಲಸಿಕೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದೆ.
ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ಯಶಸ್ವಿ ಹಂತ ೧ ಪ್ರಯೋಗಗಳ ನಂತರ ೨೦೨೬ ರ ಮಧ್ಯದಲ್ಲಿ ಡೆಂಗ್ಯೂ ಲಸಿಕೆಯನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಲಸಿಕೆಯ ಸುರಕ್ಷತೆಯನ್ನು ನಿರ್ಧರಿಸಲು ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ಮೊದಲ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ. ಆನಂದ್ ಕುಮಾರ್ ತಿಳಿಸಿದ್ದಾರೆ.
ಐಐಎಲ್ ವ್ಯವಸ್ಥಾಪಕ ನಿರ್ದೇಶಕ ಕೆ ಆನಂದ್ ಕುಮಾರ್ ಮಾತನಾಡಿ, ೧೮-೫೦ ವರ್ಷ ವಯಸ್ಸಿನ ಸುಮಾರು ೯೦ ಜನರ ಮೇಲೆ ಲಸಿಕೆಯ ಆರಂಭಿಕ ಹಂತದ ಪ್ರಯೋಗಗಳನ್ನು ನಡೆಸಲಾಗಿದೆ, ಇದು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ತೋರಿಸಿಲ್ಲ. ನಾವು ಆರಂಭಿಕ ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಲಿದ್ದೇವೆ ಮತ್ತು ಶೀಘ್ರದಲ್ಲೇ ಮುಂದಿನ ಹಂತಕ್ಕೆ ಹೋಗುತ್ತೇವೆ. ಇದು ೨ ರಿಂದ ೩ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಜನವರಿ ೨೦೨೬ ರ ವೇಳೆಗೆ ವಾಣಿಜ್ಯ ಬಳಕೆಗಾಗಿ ಲಸಿಕೆಯನ್ನು ಪ್ರಾರಂಭಿಸಬಹುದು ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಲಸಿಕೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಎರಡನೇ ಮತ್ತು ಮೂರನೇ ಹಂತದ ಪ್ರಯೋಗಗಳು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಭಾರತದಲ್ಲಿ ಮಾತ್ರ, ಪ್ರತಿ ವರ್ಷ ೨ ರಿಂದ ೨.೫ ಲಕ್ಷ ಡೆಂಗ್ಯೂ ವೈರಸ್ ಪ್ರಕರಣಗಳು ವರದಿಯಾಗುತ್ತವೆ . ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ , ಕಳೆದ ಎರಡು ದಶಕಗಳಲ್ಲಿ ಡೆಂಗ್ಯೂ ಪ್ರಕರಣಗಳು ೮ ಪಟ್ಟು ಹೆಚ್ಚಾಗಿದೆ. ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ೪೦ ಕೋಟಿ ಜನರು ಡೆಂಗ್ಯೂ ಸೋಂಕನ್ನು ಎದುರಿಸಬೇಕಾಗುತ್ತದೆ. ಈ ರೋಗವನ್ನು ರೋಗಲಕ್ಷಣಗಳ ಆಧಾರದ ಮೇಲೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ, ಏಕೆಂದರೆ ಲಸಿಕೆಯನ್ನು ಇನ್ನೂ ತಯಾರಿಸಲಾಗಿಲ್ಲ. ತಜ್ಞರ ಪ್ರಕಾರ, ಸೊಳ್ಳೆಗಳಿಂದ ಹರಡುವ ಡೆಂಗ್ಯೂಗೆ ಸಾಮಾನ್ಯವಾಗಿ ೪ ಸಿರೊಟೈಪ್‌ಗಳು ಅಥವಾ ರೂಪಾಂತರಗಳಿವೆ. ಈ ಕಾರಣದಿಂದಾಗಿ, ಎಲ್ಲಾ ನಾಲ್ಕು ರೂಪಾಂತರಗಳ ವಿರುದ್ಧ ಸಮಾನವಾಗಿ ಪರಿಣಾಮಕಾರಿಯಾದ ಲಸಿಕೆಯನ್ನು ತಯಾರಿಸುವುದು ಕಷ್ಟ.