ಅಕ್ಕಿ ಮೂಟೆ ಕುಸಿತ ಮಹಿಳೆ ಪಾರು
ಮುಂಬೈ,ಮಾ.೧೮-ನವಿ ಮುಂಬೈನ ವಾಶಿ ಪ್ರದೇಶದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾರುಕಟ್ಟೆಯಲ್ಲಿ ಭಯಾನಕ ಘಟನೆ ನಡೆದಿದೆ.
ಗೋಡೌನ್ ಒಂದರಲ್ಲಿ ಮಹಿಳೆಯೊಬ್ಬರು ಕಸ ಗುಡಿಸುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿ ಸಾಲಾಗಿ ಜೋಡಿಸಿಟ್ಟಿದ್ದಂತಹ ಅಕ್ಕಿ ಮೂಟೆಗಳು ಏಕಾಏಕಿ ಆಕೆಯ ಮೇಲೆ ಕುಸಿದು ಬಿದ್ದಿವೆ.
ತಕ್ಷಣವೇ ಮಹಿಳೆ ಧಾನ್ಯದ ಚೀಲಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಅವರ ರಕ್ಷಣೆ ಧಾವಿಸಿ ಬಂದ ಇತರೆ ಕೆಲಸಗಾರರು ತಮ್ಮ ಸಮಯ ಪ್ರಜ್ಞೆ ಮತ್ತು ದಿಢೀರ್ ಕಾರ್ಯಾಚರಣೆಯಿಂದ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.ಅವರ ಸಹೋದ್ಯೋಗಿಗಳು ತಕ್ಷಣ ಅವರನ್ನು ರಕ್ಷಿಸಿದ್ದಾರೆ. ಈ ದೃಶ್ಯ ಗೋದಾಮಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ .ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ಗೋದಾಮಿನೊಳಗೆ ಕಸ ಗುಡಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ ಮತ್ತು ಇದ್ದಕ್ಕಿದ್ದಂತೆ ಅಕ್ಕಿ ಮೂಟೆಯ ರಾಶಿ ಆಕೆಯ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.