ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಜಾ
ನವದೆಹಲಿ,ಮಾ.೧೮- ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಜಾಗೊಳಿಸಿದ್ದು, ಶರಣಾಗುವಂತೆ ಸೂಚಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನು ಪಡೆಯುವ ಮೊದಲು ಜೈನ್ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಜಾಮೀನು ಅರ್ಜಿ ಆಲಿಸಿ ವಿಸ್ತರಣೆ ಕೋರಿಕೆಯನ್ನು ತಿರಸ್ಕರಿಸಿದ್ದು ನ್ಯಾಯಾಲಯಕ್ಕೆ ಶರಣಾಗುವಂತೆ ನಿರ್ದೇಶನ ನೀಡಿದೆ.
ಮಾಜಿ ಸಚಿವರ ಪರ ವಾದ ಮಂಡಿಸಿದ ವಕೀಲ ವಿವೇಕ್ ಜೈನ್, ಅವರ ಅನಾರೋಗ್ಯದ ಕಾರಣ ನೀಡಿ ಶರಣಾಗಲು ಕಾಲಾವಕಾಶ ವಿಸ್ತರಿಸುವಂತೆ ಕೋರಿದರು. ನ್ಯಾಯಾಲಯ ವಿನಂತಿಯನ್ನು ತಿರಸ್ಕರಿಸಿತು
ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ತಿಹಾರ್ ಜೈಲಿನ ಬಾತ್ರೂಮ್ನಲ್ಲಿ ಬಿದ್ದ ನಂತರ ಮಧ್ಯಂತರ ವೈದ್ಯಕೀಯ ಜಾಮೀನು ಪಡೆದರು. ಕಳೆದ ವರ್ಷ ಜುಲೈ ೨೧ ರಂದು ಅವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರನ್ನು ಮೇ ೨೦೨೨ ರಲ್ಲಿ ಬಂಧಿಸಲಾಯಿತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸಂಪುಟದ ಮಾಜಿ ಸಚಿವ ಜೈನ್ ಅವರು ಫೆಬ್ರವರಿ ೨೦೧೫ ರಿಂದ ಮೇ ೨೦೧೭ ರವರೆಗೆ ತಮ್ಮ ಸಚಿವ ಸ್ಥಾನ ದುರುಪಯೋಗಪಡಿಸಿಕೊಂಡು ೧.೪ ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ. ಜಾರಿ ನಿರ್ದೇಶನಾಲಯವು ಆತನೊಂದಿಗೆ ನಂಟು ಹೊಂದಿರುವ ಮೂರು ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ತನಿಖೆ ಆರಂಭಿಸಿತು.